ಡಬ್ಲಿನ್ (ಐರ್ಲೆಂಡ್):ಭಾರತ ಮತ್ತು ಐರ್ಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಿದ್ದು, ಮೊದಲ ಪಂದ್ಯ ಡಬ್ಲಿನ್‌ನ ವಿಲೇಜ್ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಲು ಎರಡೂ ತಂಡಗಳು ತವಕಿಸುತ್ತಿವೆ. ಟಾಸ್ ಗೆದ್ದ ಬುಮ್ರಾ ಪಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದೆ. ಐರ್ಲೆಂಡ್ ಪರ ಬ್ಯಾರಿ ಮೆಕಾರ್ಥಿ ಅರ್ಧಶತಕ ಗಳಿಸಿ ಗರಿಷ್ಠ ಸ್ಕೋರರ್ ಆದರು. ಭಾರತದ ಪರ ಬುಮ್ರಾ, ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ನೋಯಿ ತಲಾ 2 ವಿಕೆಟ್ ಪಡೆದರು. ಇದಕ್ಕುತ್ತರವಾಗಿ ಭಾರತ 6.5 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ. ಸದ್ಯ ಮಳೆಯಿಂದಾಗಿ ಪಂದ್ಯ ನಿಂತಿದೆ. ಭಾರತವು ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಎರಡು ರನ್ ಮುಂದಿದ್ದು, ಒಂದು ವೇಳೆ ಪಂದ್ಯ ಆರಂಭಗೊಳ್ಳದಿದ್ದಲ್ಲಿ ಭಾರತ ಗೆಲುವು ಸಾಧಿಸಲಿದೆ.
ಐರ್ಲೆಂಡ್ ಕಳಪೆ ಆರಂಭ ಪಡೆಯಿತು. 31 ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡಿತ್ತು. 11 ತಿಂಗಳ ನಂತರ ಕ್ರಿಕೆಟ್‌ಗೆ ಮರಳಿದ ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲೇ ಐರ್ಲೆಂಡ್ನ ಎರಡು ವಿಕೆಟ್ಗಳನ್ನು ಪಡೆದರು. ಆಂಡ್ರ್ಯೂ ಬಲ್ಬಿರ್ನಿ (4) ಮತ್ತು ಲಾರ್ಕೆನ್ ಟಕರ್ (0) ಅವರ ವಿಕೆಟ್ ಉರುಳಿಸಿದರು. ಇದರ ನಂತರ, ಐದನೇ ಓವರ್‌ನಲ್ಲಿ, ಪ್ರಸಿದ್ಧ ಕೃಷ್ಣ ಕೂಡ ಹ್ಯಾರಿ ಟೆಕ್ಟರ್ ವಿಕೆಟ್ ಪಡೆದರು. ರವಿ ಬಿಷ್ಣೋಯ್ ನಾಯಕ ಪಾಲ್ ಸ್ಟಿರ್ಲಿಂಗ್ (11) ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಏಳನೇ ಓವರ್‌ನಲ್ಲಿ ಡಾಕ್ರೆಲ್ (1) ವಿಕೆಟ್ ಪಡೆಯುವ ಮೂಲಕ ಪ್ರಸಿದ್ದ ಕೃಷ್ಣ ಐರ್ಲೆಂಡ್‌ಗೆ ಐದನೇ ಹೊಡೆತ ನೀಡಿದರು. ಇದಾದ ಬಳಿಕ ಮಾರ್ಕ್ 16 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ಕ್ಯಾಂಪರ್ ಮತ್ತು ಬ್ಯಾರಿ ಏಳನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿದರು.
ಸಂಜು ಸ್ಯಾಮ್ಸನ್ಗೆ ಮತ್ತೊಂದು ಅವಕಾಶ: ವೆಸ್ಟ್ ಇಂಡೀಸ್ ಸರಣಿಯಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ಗೆ ಕೀಪಿಂಗ್ ಮತ್ತು ಮಧ್ಯಮ ಕ್ರಮಾಂಕದ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.