ಡಬ್ಲಿನ್ (ಐರ್ಲೆಂಡ್): ಮುಂದಿನ ವರ್ಷದ ಟಿ-20 ವಿಶ್ವಕಪ್ಗೆ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಭಾರತ ಈಗಲೇ ತಂಡದಲ್ಲಿ ಪ್ರಯೋಗ ಆರಂಭಿಸಿದೆ. ಇಂದಿನಿಂದ ಐರ್ಲೆಂಡ್ ವಿರುದ್ಧ ಆರಂಭವಾಗಲಿರುವ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದೆ. ಐಪಿಎಲ್ ಮತ್ತು ದೇಶೀ ಕ್ರಿಕೆಟ್ನಲ್ಲಿ ಮಿಂಚಿದ ಪ್ರತಿಭೆಗಳು ಈ ಸರಣಿಯಲ್ಲಿದ್ದು, ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ತಂಡ ಮೈದಾನಕ್ಕಿಳಿಯಲಿದೆ.
ಸರಿ ಸುಮಾರು ಹನ್ನೊಂದು ತಿಂಗಳ ಬಿಡುವಿನ ನಂತರ ಜಸ್ಪ್ರೀತ್ ಬುಮ್ರಾ ಮೈದಾನಕ್ಕಿಳಿಯುತ್ತಿದ್ದು, ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಹಿನ್ನೆಲೆ ಎಲ್ಲರ ಕಣ್ಣು ಇವರ ಮೇಲೆಯೇ ಇದೆ. ಬುಮ್ರಾ ಮೇಲೆ ಈ ಸರಣಿಯಲ್ಲಿ ಕಮ್ಬ್ಯಾಕ್ ಮಾಡುವುದರ ಜೊತೆಗೆ ನಾಯಕತ್ವದ ಒತ್ತಡವೂ ಇದೆ. ಇವೆರಡರ ನಡುವ ಬುಮ್ರಾ ತಮ್ಮನ್ನು ಸಾಬೀತು ಮಾಡಿಕೊಳ್ಳಬೇಕಿದೆ. ಇವರ ಜೊತೆ ಪ್ರಸಿದ್ಧ ಕೃಷ್ಣ ಸಹ ಗಾಯದಿಂದ ಹೊರ ಬಂದ ನಂತರ ಟೀಮ್ ಇಂಡಿಯಾಗಾಗಿ ಆಡುತ್ತಿದ್ದಾರೆ. ಈ ಕನ್ನಡಿಗನ ಮೇಲೆಯೂ ನಿರೀಕ್ಷೆಗಳು ಬಹಳಷ್ಟಿವೆ.
ಭಾರತ ತಂಡದಲ್ಲಿ ಐಪಿಎಲ್ ಸ್ಟಾರ್ಗಳ ದಂಡೇ ಇದೆ. 2023 ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶೈನ್ ಆದ ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಜಿತೇಶ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಇದ್ದಾರೆ. ಇವರಲ್ಲಿ ರಿಂಕು, ಜಿತೇಶ್ ಶರ್ಮಾ ಪದಾರ್ಪಣೆಗೆ ಎದುರು ನೋಡುತ್ತಿದ್ದಾರೆ. ಗಾಯಕ್ವಾಡ್ ಮತ್ತು ದುಬೆ ತಂಡಕ್ಕೆ ಕಮ್ಬ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಅನುಭವಿ ಸಂಜು ಸ್ಯಾಮ್ಸನ್ ಮತ್ತು ಡೆಬ್ಯೂಗೆ ಎದುರು ನೋಡುತ್ತಿರುವ ಜಿತೇಶ್ ಶರ್ಮಾ ನಡುವೆ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಡಲಿದೆ. ಅಲ್ಲದೇ ಆಲ್ರೌಂಡರ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್ ಮತ್ತು ಶಿವಂ ದುಬೆ ನಡುವೆ ಪೈಪೋಟಿ ಇದೆ. ಭಾರತಕ್ಕೆ ಏಕದಿನ ಆಡಿರುವ ಅನುಭವ ಇರುವ ಶಹಬಾಜ್ ಅಹಮದ್ ಟಿ-20 ಪದಾರ್ಪಣೆ ಅವಕಾಶವನ್ನು ಈ ಸರಣಿಯಲ್ಲಿ ಎದುರು ನೋಡುತ್ತಿದ್ದಾರೆ. ವಿಂಡೀಸ್ ಪ್ರವಾಸದಲ್ಲಿ ಡೆಬ್ಯೂ ಆಗಿ ಉತ್ತಮ ಪ್ರದರ್ಶನ ನೀಡಿರುವ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ ಮತ್ತು ಮುಖೇಶ್ ಕುಮಾರ್ ಈ ಸರಣಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದಿರುವ ಐರ್ಲೆಂಡ್ ತಂಡವನ್ನು ಕಡೆಗಣಿಸುವಂತಿಲ್ಲ. ಅಲ್ಲಿಯೂ ಅನುಭವಿ ಸ್ಟಾರ್ ಆಟಗಾರರಿದ್ದು, ಭಾರತದ ಐಪಿಎಲ್ ಪ್ರತಿಭೆಗಳನ್ನು ಮಣಿಸಿ ತಮ್ಮ ಸಾಮರ್ಥ್ಯ ತೋರಲು ಅವರೂ ಸಿದ್ಧರಾಗಿದ್ದಾರೆ. ಇದರಿಂದ ಬುಮ್ರಾಗೆ ಈ ಸರಣಿಯಲ್ಲಿ ಕಠಿಣ ಪೈಪೋಟಿ ಎದುರಿಸಬೇಕಾಗಿ ಬರಬಹುದು.