ನವದೆಹಲಿ:ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಪ್ರತಿದಿನ ಒಂದಲ್ಲೊಂದು ಹೊಸ ದಾಖಲೆ ನಿರ್ಮಾಣವಾಗುತ್ತಿದೆ. ಹಳೆಯ ಅನುಭವಿ ಆಟಗಾರರ ದಾಖಲೆಗಳನ್ನು ಮುರಿಯುವ ಮೂಲಕ ಹೊಸ ಆಟಗಾರರೂ ಮುನ್ನುಗ್ಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಐರ್ಲೆಂಡ್ ತಂಡದ ಉಪನಾಯಕ ಪೌಲ್ ಸ್ಟರ್ಲಿಂಗ್ ಪಾಕ್ ನಾಯಕ ಬಾಬರ್ ಅಜಮ್ ಅವರ ದಾಖಲೆ ಮುರಿದು ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.
ಅಂತಾರಾಷ್ಟ್ರೀಯ ಟಿ20ಯಲ್ಲಿ 345 ಬೌಂಡರಿಗಳನ್ನು ಪಾಲ್ ಸ್ಟರ್ಲಿಂಗ್ ಗಳಿಸಿದ್ದಾರೆ. ಈ ಮೂಲಕ ಟಿ20ಯಲ್ಲಿ 342 ಬೌಂಡರಿ ಗಳಿಸಿರುವ ಬಾಬರ್ ಅಜಮ್ ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಮುನ್ನೂರಕ್ಕೂ ಹೆಚ್ಚು ಬೌಂಡರಿ ಬಾರಿಸಿದ ಆಟಗಾರರ ನಡುವೆ ಈ ಬಾರಿಯ ವಿಶ್ವಕಪ್‌ನಲ್ಲಿ ಪೈಪೋಟಿ ನಡೆಯಲಿದೆ.
ವಿರಾಟ್, ರೋಹಿತ್, ಪಿಂಚ್, ಮಾರ್ಟಿನ್ ಗಪ್ಟಿಲ್ ಮತ್ತು ಬಾಬರ್ ಅಜಮ್ 300 ಕ್ಕೂ ಹೆಚ್ಚು ಬೌಂಡರಿಯನ್ನು ಟಿ 20ಯಲ್ಲಿ ಗಳಿಸಿದ್ದಾರೆ. ಮುನ್ನೂರಕ್ಕೂ ಹೆಚ್ಚು ಬೌಂಡರಿ ಹೊಡೆದವರಲ್ಲಿ ಭಾರತದ ನಾಯಕ ರೋಹಿತ್ ಮತ್ತು ವಿರಾಟ್ ಕೂಡಾ ಇದ್ದಾರೆ. 337 ಬೌಂಡರಿಯಿಂದ ರೋಹಿತ್ ಶರ್ಮಾ ಮೂರನೇ ಸ್ಥಾನ, 331ರಿಂದ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನ ಮತ್ತು ಮಾರ್ಟಿನ್ ಗಪ್ಟಿಲ್ 309 ರಿಂದ ಐದರಲ್ಲಿದ್ದಾರೆ. ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ 303 ಬೌಂಡರಿಯಿಂದ ಆರನೇ ಸ್ಥಾನದಲ್ಲಿದ್ದಾರೆ.
ಈ ಆರು ಜನ ಆಟಗಾರರು ಈ ಬಾರಿಯ ವಿಶ್ವಕಪ್ ಆಡುತ್ತಿದ್ದಾರೆ. ಅದರೊಂದಿಗೆ ಎಲ್ಲರೂ ಅದ್ಭುತ ಫಾರ್ಮನಲ್ಲಿದ್ದು ಅತೀ ಹೆಚ್ಚು ಬೌಂಡರಿಯನ್ನು ಈ ಬಾರಿ ಯಾರು ದಾಖಲಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಐರ್ಲೆಂಡ್ ಒಂದು ಪಂದ್ಯ ಸೋತು ಒಂದರಲ್ಲಿ ಗೆದ್ದಿದ್ದು ಸೂಪರ್ 12 ಅವಕಾಶಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸಬೇಕಿದೆ. ಸೂಪರ್ 12 ರಲ್ಲಿ ಪ್ರವೇಶ ಪಡೆದರೆ ಪಾಲ್ ಸ್ಟರ್ಲಿಂಗ್ ಕೂಡ ರೇಸ್ನಲ್ಲಿರಲಿದ್ದಾರೆ.
ಇದನ್ನೂ ಓದಿ:'ಏಷ್ಯಾ ಕಪ್ ಆಡಲು ಪಾಕಿಸ್ತಾನಕ್ಕೆ ಬರುವುದಿಲ್ಲ ಎಂಬ ಏಕಪಕ್ಷೀಯ ನಿರ್ಧಾರ ಸರಿಯಲ್ಲ'