ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಆಂದೋಲನದಲ್ಲಿ ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸಿದ್ದ 26 ವರ್ಷದ ಫುಟ್ಬಾಲ್ ಆಟಗಾರ ನಾಸರ್ ಅಜಾದಾನಿ ಅವರಿಗೂ ಗಲ್ಲು ಶಿಕ್ಷೆ ವಿಧಿಸಲು ಇರಾನ್ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಸರಿಯಾಗಿ ಸ್ಕಾರ್ಪ್ ಧರಿಸಿಲ್ಲ ಎಂಬ ಕಾರಣಕ್ಕೆ ಬಂಧನಕ್ಕೊಳಪಟ್ಟಿದ್ದ 22 ವರ್ಷದ ಯುವತಿ ಮಹ್ಸಾ ಅಮಿನಿ ಪೊಲೀಸ್ ವಶದಲ್ಲಿ ಮೃತಪಟ್ಟಿದ್ದರು. ಈಕೆಯ ಸಾವಿನ ನಂತರ ಇರಾನ್‌ನಲ್ಲಿ ಹಿಜಾಬ್ ವಿರೋಧಿಸಿ ಮಹಿಳಾ ಹಕ್ಕಿಗಾಗಿ ದೊಡ್ಡ ಮಟ್ಟದ ಆಂದೋಲನ ನಡೆಯುತ್ತಿದೆ. ಈ ಹೋರಾಟವನ್ನು ಬೆಂಬಲಿಸಿದ್ದ ಕಾರಣಕ್ಕಾಗಿ ಫುಟ್ಬಾಲ್ ಆಟಗಾರನನ್ನೂ ಸರ್ಕಾರವು ಮರಣದಂಡನೆಗೆ ಗುರಿಪಡಿಸಲು ತೀರ್ಮಾನಿಸಿದೆ ಎಂದು ವರದಿಗಳು ತಿಳಿಸಿವೆ.
ವಿಶ್ವಾದ್ಯಂತ ವೃತ್ತಿಪರ ಫುಟ್ಬಾಲ್ ಆಟಗಾರರನ್ನು ಪ್ರತಿನಿಧಿಸುವ ಎಫ್ಐಎಫ್ಪಿಆರ್ಓ (FIFPRO) ಸಂಸ್ಥೆ ಪ್ರತಿಕ್ರಿಯಿಸಿ, ನಾಸರ್ ಅಜಾದಾನಿ ಅವರನ್ನು ಗಲ್ಲಿಗೇರಿಸುವ ವಿಷಯ ತಿಳಿದು ಆಘಾತವಾಗಿದೆ. ನಾವು ಅವರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ. ಜೊತೆಗೆ ಅವರಿಗೆ ವಿಧಿಸಿರುವ ಈ ಕಠಿಣ ಶಿಕ್ಷೆಯನ್ನು ತಕ್ಷಣವೇ ರದ್ದು ಮಾಡುವಂತೆ ಕರೆ ನೀಡುತ್ತೇವೆ ಎಂದು ಟ್ವೀಟ್ ಮಾಡಿದೆ.
ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲೂ ಇರಾನ್ ಆಟಗಾರರು ಮಹಿಳಾ ಹೋರಾಟವನ್ನು ಬೆಂಬಲಿಸಿ, ಇದರ ಭಾಗವಾಗಿ ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ಪಂದ್ಯದಲ್ಲಿ ದೇಶದ ರಾಷ್ಟ್ರಗೀತೆಯನ್ನೂ ಹಾಡಿರಲಿಲ್ಲ.
ಇದನ್ನೂ ಓದಿ:ಇರಾನ್ನ 80 ನಗರಗಳಿಗೆ ಹರಡಿದ ಹಿಜಾಬ್ ವಿರೋಧಿ ಕಿಚ್ಚು: 300ಕ್ಕೂ ಹೆಚ್ಚು ಮಂದಿ ಸಾವು, 14 ಸಾವಿರ ಜನರ ಸೆರೆ