ಕಳೆದೆರಡು ಪಂದ್ಯಗಳಲ್ಲಿ ಸೋತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 32 ರನ್ಗಳಿಂದ ಸೋಲಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದ್ದಲ್ಲದೆ, ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಎರಡು ಪಂದ್ಯಗಳಲ್ಲಿ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಜಸ್ಥಾನ ತಂಡ ಸಿಎಸ್ಕೆ ವಿರುದ್ಧ ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯದೊಂದಿಗೆ ಗೆಲುವು ದಾಖಲಿಸಿತು. ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಮತ್ತು ಸಿಎಸ್ಕೆ ತಂಡದ ಶಿವಂ ದುಬೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿದರು.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರ ಇನ್ನಿಂಗ್ಸ್ 43 ಎಸೆತಗಳಲ್ಲಿ 77 ರನ್, ಅಂತಿಮ ಓವರ್ಗಳಲ್ಲಿ ಧ್ರುವ್ ಜುರೆಲ್ (15 ಎಸೆತಗಳಲ್ಲಿ 34 ರನ್) ಮತ್ತು ದೇವದತ್ ಪಡಿಕ್ಕಲ್ (13 ಎಸೆತಗಳಲ್ಲಿ 27 ರನ್) ಅಬ್ಬರದ ಬ್ಯಾಟಿಂಗ್‌ನಿಂದ ರಾಯಲ್ಸ್ 5 ವಿಕೆಟ್‌ಗೆ 202 ರನ್ ಪೇರಿಸಿತ್ತು. ಈ ಮೊತ್ತ ತಲುಪುವಲ್ಲಿ ನಾಯಕ ಧೋನಿ ಪಡೆ ಎಡವಿತು.
ಈ ಆವೃತ್ತಿಯಲ್ಲಿ ಚೆನ್ನೈ ಮತ್ತು ರಾಜಸ್ಥಾನ ರಾಯಲ್ಸ್ ಎರಡನೇ ಬಾರಿ ಮುಖಾಮುಖಿಯಾಗಿದ್ದು, ಎರಡರಲ್ಲೂ ರಾಜಸ್ಥಾನ ಗೆಲುವು ದಾಖಲಿಸಿದೆ. ಎರಡೂ ಬಾರಿಯೂ ರಾಯಲ್ಸ್ ಧೋನಿ ತಂಡವನ್ನು ಸೋಲಿಸಿದೆ. ಎರಡೂ ಸಲವೂ ರಾಜಸ್ಥಾನ ನೀಡಿದ ಗುರಿ ಬೆನ್ನತ್ತಲು ಧೋನಿ ಬಳಗ ವಿಫಲವಾಗಿದೆ. ಮೊದಲ ಪಂದ್ಯವನ್ನು ಮೂರು ರನ್ನಿಂದ ರೋಚಕವಾಗಿ ಗೆದ್ದರೆ, ಎರಡನೇ ಮುಖಾಮುಖಿಯಲ್ಲಿ 32 ರನ್ಗಳಿಂದ ನಿರಾಯಾಸ ಗೆಲುವು ದಾಖಲಿಸಿದೆ.
ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹೀರೋ ಆದರು. ತಮ್ಮ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡ ಯಶಸ್ವಿ, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅವರು 8 ಪಂದ್ಯಗಳಲ್ಲಿ 3 ಅರ್ಧ ಶತಕಗಳ ಸೇರಿದಂತೆ 40 ಬೌಂಡರಿ ಮತ್ತು 10 ಸಿಕ್ಸರ್‌ಗಳಿಂದ 304 ರನ್ ಬಾರಿಸಿದ್ದಾರೆ.