ನವದೆಹಲಿ:ಸೋಮವಾರ ರಾತ್ರಿ ನಡೆದ ಲಖನೌ ಮತ್ತು ಆರ್ಸಿಬಿ ನಡುವಿನ ಪಂದ್ಯ ಸೋಲು ಗೆಲುವಿಗಿಂತಲೂ ಆಟಗಾರರ ಕಿತ್ತಾಟದಿಂದಲೇ ಕುಖ್ಯಾತಿ ಪಡೆಯಿತು. ಅಫ್ಘಾನಿಸ್ತಾನದ ಆಟಗಾರ ನವೀನ್ ಉಲ್ ಹಕ್ ಮತ್ತು ವಿರಾಟ್ ಮಧ್ಯೆ ಮೈದಾನದಲ್ಲಿ ಶುರುವಾದ ಸಣ್ಣ ಅಸಮಾಧಾನ ಪಂದ್ಯ ಮುಗಿದ ಬಳಿಕ ಸ್ಫೋಟಗೊಂಡಿತು. ಎಲ್ಎಸ್ಜಿ ಮೆಂಟರ್ ಗೌತಮ್ ಗಂಭೀರ್ ಮಧ್ಯಪ್ರವೇಶದ ಬಳಿಕ ಅದು ಇನ್ನಷ್ಟು ತಾರಕ್ಕೇರಿತ್ತು.
ಮೈದಾನದಲ್ಲಿ ಏನೆಲ್ಲಾ ಆಯ್ತು ಎಂಬುದರ ಬಗ್ಗೆ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 2ನೇ ಶತಮಾನದ ರೋಮನ್ ಚಕ್ರವರ್ತಿ ಮತ್ತು ತತ್ವಜ್ಞಾನಿ ಮಾರ್ಕಸ್ ಆರೆಲಿಯಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದಾರೆ.
"ನಾವು ಕೇಳುವುದೆಲ್ಲವೂ ಒಂದು ಅಭಿಪ್ರಾಯವೇ ಹೊರತು ಸತ್ಯವಲ್ಲ. ನಾವು ನೋಡುವುದೆಲ್ಲವೂ ದೃಷ್ಟಿಕೋನವೇ ಹೊರತು ಸತ್ಯವಲ್ಲ" ಎಂದು ಬರೆದುಕೊಂಡಿರುವ ಕೊಹ್ಲಿ ಸ್ಟೋರಿ ಪೋಸ್ಟ್ ಮಾಡಿ ಕೊಂಡಿದ್ದಾರೆ. ಅಂದರೆ ಮೈದಾನದಲ್ಲಿ ನಡೆದ ಗಲಾಟೆಗೆ ಕಾರಣ ಅರಿಯದೇ ಪ್ರತಿಕ್ರಿಯಿಸಿದರ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ.
ನಡೆದಿದ್ದೇನು?:ಆರ್ಸಿಬಿ ಮತ್ತು ಎಲ್ಎಸ್ಜಿ ನಡುವಣ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೆಲ ಸನ್ಹೆ ಮಾಡುತ್ತಿರುವುದು ಮತ್ತು ಅತಿಯಾಗಿ ಸಂಭ್ರಮಿಸುತ್ತಿರುವುದು ಲಖನೌ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ರಿಗೆ ಅಸಮಾಧಾನ ತಂದಿತ್ತು. ನವೀನ್ ಉಲ್ ಹಕ್ ನಡೆಗೆ ವಿರಾಟ್ ಆಟದ ಮಧ್ಯೆಯೇ ಕಿಡಿಕಾರಿದ್ದರು. ಉಭಯ ತಂಡಗಳ ನಡುವೆ ಕಳೆದ ಪಂದ್ಯದಲ್ಲಿ ಗೆಲುವಿನ ಬಳಿಕ ಗಂಭೀರ್ ಆರ್ಸಿಬಿ ಅಭಿಮಾನಿಗಳನ್ನು ಬಾಯಿ ಮುಚ್ಚಿಕೊಂಡಿರುವಂತೆ ಸನ್ನೆ ಮಾಡಿ ಸೂಚಿಸಿದ್ದರು.