ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾನುವಾರ ತಮ್ಮ 7ನೇ ಐಪಿಎಲ್ ಶತಕ ಬಾರಿಸುವ ಮೂಲಕ ಹೊಸ ಮೈಲಿಗಲ್ಲು ತಲುಪಿದರು. ವಿಶ್ವದ ಶ್ರೀಮಂತ ದೇಶೀಯ ಚುಟುಕು ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿಯೇ ಈ ಸಾಧನೆ ತೋರಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದಾಯಿತು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. 60 ಎಸೆತಗಳಲ್ಲಿ 100 ರನ್ ಕಲೆ ಹಾಕಿದ ಅವರ ಇನ್ನಿಂಗ್ಸ್‌ನಲ್ಲಿ 13 ಬೌಂಡರಿಗಳು ಮತ್ತು 1 ಸಿಕ್ಸರ್ ಸೇರಿದ್ದವು. ಇದೀಗ ಒಟ್ಟು 7 ಶತಕಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬಾರಿ ಮೂರಂಕಿ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ, ಐಪಿಎಲ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಶತಕ ಬಾರಿಸಿದ ಆರ್ಸಿಬಿಯ ಮೊದಲ ಬ್ಯಾಟರ್ ಕೂಡ ಆಗಿದ್ದಾರೆ.
ಇದನ್ನೂ ಓದಿ :IPL 2023 : ಕ್ಯಾಮರೂನ್ ಗ್ರೀನ್ ಶತಕ, ರೋಹಿತ್ ಅರ್ಧಶತಕ.. ಮುಂಬೈಗೆ ಪ್ಲೇ ಆಫ್ ಆಸೆ ಜೀವಂತ
ಇನ್ನೊಂದೆಡೆ, ಪಂದ್ಯ ಸೋತ ಹಿನ್ನೆಲೆಯಲ್ಲಿ ಈ ವರ್ಷದ ಟೂರ್ನಿಯ ಪ್ಲೇ ಆಫ್ ರೇಸ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತವಾಗಿ ಹೊರಬಿತ್ತು. ಗುಜರಾತ್ ತಂಡದ ಪ್ರತಿಭಾನ್ವಿತ ಯುವ ಬ್ಯಾಟರ್ ಶುಭಮನ್ ಗಿಲ್ ಅವರ ಅಮೋಘ ಶತಕದಾಟದ ಫಲವಾಗಿ ಗುಜರಾತ್ ಗೆಲುವು ಸಾಧಿಸಿತು. ಈ ಮೂಲಕ ಫ್ಲೇ ಆಫ್ ಕನಸು ಕಂಡು ಛಲದಿಂದ ಬ್ಯಾಟಿಂಗ್ ವೈಭವ ಮೆರೆದ ವಿರಾಟ್ ಕೊಹ್ಲಿ ಕನಸು ಮತ್ತೆ ಕಮರಿತು. ಆರ್‌ಸಿಬಿ ಅಭಿಮಾನಿಗಳಿಗೆ ನಿರಾಶೆಯಾಯಿತು.