ಬೆಂಗಳೂರು:ವಿರಾಟ್ ಕೊಹ್ಲಿ ಬ್ಯಾಟ್ನಿಂದ ರನ್ ಬಂದರೆ ಒಂದಲ್ಲಾ ಒಂದು ದಾಖಲೆ ನಿರ್ಮಾಣ ಆಗುತ್ತದೆ, ಇಲ್ಲ ದಾಖಲೆ ಮುರಿಯುತ್ತಾರೆ. ಇದು ಅವರ ರನ್ ಗಳಿಸುವ ಹಸಿವಿನ ಗುರುತಾಗಿದೆ. ಅವರ ಸ್ಕೋರ್ ಗಳಿಕೆಯ ವೇಗವನ್ನು ಕಂಡು ಅಭಿಮಾನಿಗಳು ಅವರಿಗಿಟ್ಟ ಪ್ರೀತಿಯ ಹೆಸರು "ರನ್ ಮಷಿನ್" ಎಂದು. ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲೇ ವಿರಾಟ್ ಅಬ್ಬರಿಸಿದ್ದು, 2016ರ ಸ್ಕೋರ್ ದಾಖಲೆ ಮತ್ತೆ ವಿರಾಟ್ ಅವರೇ ಮುರಿಯುವ ಸಾಧ್ಯತೆಯೂ ಇದೆ.
ಅತ್ತ 15 ವರ್ಷಗಳಿಂದ "ಈ ಸಲ ಕಪ್ ನಮ್ದೆ" ಎಂದು ಚಾಂಪಿಯನ್ ಆಗದಿದ್ದರೂ ತಂಡವನ್ನು ಬೆಂಬಲಿಸುತ್ತಾ ಬಂದಿರುವ ಅಭಿಮಾನಿಗಳಗೆ ಈ ಬಾರಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತೆ ಭರವಸೆ ಇಟ್ಟಿದ್ದಾರೆ. ವಿರಾಟ್ ಮತ್ತು ಫಾಫ್ ನಿನ್ನೆ ಅದ್ಭುತ ಜೊತೆಯಾಟ ನೀಡಿದ್ದು, ತಂಡ 8 ವಿಕೆಟ್ಗಳಿಂದ ಲೀಲಾಜಾಲವಾದ ಗೆಲುವು ದಾಖಲಿಸಲು ನೆರವಾಯಿತು.
ನಿನ್ನೆ ವಿರಾಟ್ ಮತ್ತು ಡು ಪ್ಲೆಸಿಸ್ ಮಾಡಿದ ಜೊತೆಯಾಟವೂ ದಾಖಲೆಯಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಇದು ನಾಲ್ಕನೇ ಬೃಹತ್ ಆರಂಭಿಕರ ಜೊತೆಯಾಟವಾಗಿದೆ. 2008ರ ಮೊದಲ ಆವೃತ್ತಿಯಲ್ಲಿ ಆ್ಯಡಮ್ ಗಿಲ್ಕ್ರಿಸ್ಟ್ ಮತ್ತು ವಿವಿಎಸ್ ಲಕ್ಷ್ಮಣ್ ಡೆಕ್ಕನ್ ಚಾರ್ಜಸ್ ಪರ 155 ರನ್ಗಳ ಅಜೇಯ ಜೊತೆಯಾಟ ಮಾಡಿದ್ದರು. 2020ರಲ್ಲಿ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಾಹ ಸನ್ ರೈಸರ್ಸ್ ಪರ 151 ರನ್ನ ಅಜೇಯ ಪ್ರದರ್ಶನ ನೀಡಿದ್ದರು. 2013ರಲ್ಲಿ ಮಹೇಲ ಜಯವರ್ಧನೆ ಮತ್ತು ವಿರೇಂದ್ರ ಸೆಹ್ವಾಗ್ 151 ರನ್ಗಳ ಜೊತೆಯಾಟ ಡೆಲ್ಲಿ ಕ್ಯಾಪಿಟಲ್ಸ್ ಪರ ಮಾಡಿದ್ದರು. ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ (71) ಮತ್ತು ಫಾಫ್ (73) 148 ರನ್ನ ಜೊತೆಯಾಟ ಮಾಡಿದರು.
ಇದಲ್ಲದೇ ವಿರಾಟ್ ಐಪಿಎಲ್ನಲ್ಲಿ ತಮ್ಮ 50ನೇ ಅರ್ಧಶತಕವನ್ನು ಪೂರೈಸಿದರು. ಐಪಿಎಲ್ನಲ್ಲಿ ಭಾರತೀಯ ಆಟಗಾರರಲ್ಲಿ 50ನೇ ಅರ್ಧಶತಕ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿ ಪಡೆದರು. ಇದಕ್ಕೂ ಮೊದಲು ಶಿಖರ್ ಧವನ್ ಜೊತೆಗೆ 49 ಅರ್ಧಶತಕ ದಾಖಲಿಸಿ ಜಂಟಿಯಾಗಿ ಪ್ರಥಮ ಸ್ಥಾನದಲ್ಲಿದ್ದರು. ಈಗ ಶಿಖರ್ ಎರಡು ಹಾಗೂ ರೋಹಿತ್ ಶರ್ಮಾ (41) ಮೂರನೇಯವರಾಗಿದ್ದಾರೆ. ಒಟ್ಟಾರೆ ಐಪಿಎಲ್ ಆಟಗಾರರಲ್ಲಿ ವಿರಾಟ್ ಎರಡನೇ ಸ್ಥಾನದಲ್ಲಿದ್ದು, ಪಟ್ಟಿಯ ಅಗ್ರದಲ್ಲಿ 60 ಅರ್ಧಶತಕ ಗಳಿಸಿದ ದೇವಿಡ್ ವಾರ್ನರ್ ಇದ್ದಾರೆ.
ವಿರಾಟ್ ಹೊಸ ದಾಖಲೆ:ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಮೂರನೇಯದ್ದಾಗಿತ್ತು. ಅವರು ಈಗಲೂ ಮೂರನೇ ಆಟಗಾರರಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಾರೆ. ಆದರೆ ಕೆಲ ವರ್ಷಗಳ ಹಿಂದೆ ವಿರಾಟ್ ಗೇಲ್ ಜೊತೆಗೆ ಐಪಿಎಲ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಎಲ್ಲರಿಗೂ ಅಚ್ಚರಿ ತಂದಿದ್ದರು. ಆರಂಭಿಕರಾಗಿ ಯಶಸ್ವಿ ಬ್ಯಾಟರ್ ಕೂಡಾ ಆಗಿದ್ದಾರೆ. ಈಗ ಐಪಿಎಲ್ನಲ್ಲಿ ಆರಂಭಿಕರಾಗಿ 3000 ರನ್ ಪೂರೈಸಿದ ದಾಖಲೆಯನ್ನೂ ಬರೆದಿದ್ದಾರೆ.
ಮಾರ್ಚ್ 15ರ ವಚನ ಈಡೇರಿಸಿದ ವಿರಾಟ್:ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮಹಿಳಾ ತಂಡ ಸತತ ಸೋಲು ಅನುಭವಿಸುತ್ತಿದ್ದ ವೇಳೆ, ವಿರಾಟ್ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯಕ್ಕೆ ಹೋಗಿದ್ದಾಗ ವನಿತೆಯರನ್ನು ಭೇಟಿಯಾಗಿ ಕೆಲ ಟಿಪ್ಸ್ ಕೊಟ್ಟಿದ್ದರಲ್ಲದೇ, ಸಂವಾದ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ವಿರಾಟ್ "ನಾನು ನನ್ನ ಬೆಸ್ಟ್ನ್ನು ತಂಡಕ್ಕಾಗಿ ಕೊಡಲು ಯಾವಾಗಲೂ ಹಂಬಲಿಸುತ್ತೇನೆ. ಅದು ಈ ಬಾರಿಯ ಐಪಿಎಲ್ನಲ್ಲಿ ಸಾಧ್ಯವಾಗಬಹುದು. ಅದು ಅಭಿಮಾನಿಗಳಿಗೂ ಹೆಚ್ಚು ಸಂತೋಷವಾಗಬಹುದು" ಎಂದಿದ್ದರು. ಅದರಂತೆ ನಿನ್ನೆ ಅಜೇಯ 82 ರನ್ನ ವಿನ್ನಿಂಗ್ ಆಟವನ್ನು ಪ್ರದರ್ಶಿಸಿ ನುಡಿದಂತೆ ಅತ್ಯುತ್ತಮವಾದುದನ್ನೇ ನೀಡಿದರು.
ಇದನ್ನೂ ಓದಿ:IPL 2023: ಅಂದು ಟೀಕೆ ಇಂದು ಪ್ರಶಂಸೆ.. ಆರ್ಸಿಬಿ ಪರ 50ನೇ ವಿಕೆಟ್ ಪಡೆದ ಸಿರಾಜ್