ಕರ್ನಾಟಕ

karnataka

ETV Bharat / sports

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್​ ಕೊಹ್ಲಿ - ETV Bharath Kannada news

ಈ ಋತುವಿನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಸಾಕಷ್ಟು ರನ್‌ಗಳು ಹೊರಬರುತ್ತಿವೆ. ವಿರಾಟ್ ಕೊಹ್ಲಿ ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೂರನೇ ಅರ್ಧಶತಕವನ್ನು ಗಳಿಸಿದರು. ಐಪಿಎಲ್‌ನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡುವಾಗ ವಿರಾಟ್ ಮತ್ತೊಂದು ದಾಖಲೆ ಬರೆದಿದ್ದಾರೆ.

ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್​ ಕೊಹ್ಲಿ
virat kohli completed 2500 runs at chinnaswamy stadium

By

Published : Apr 15, 2023, 10:25 PM IST

ಬೆಂಗಳೂರು: ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಾಟಾ ಐಪಿಎಲ್ 2023 ರ 20 ನೇ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅದ್ಭುತ ಅರ್ಧಶತಕ ಗಳಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್ ಮನ್ ವಿರಾಟ್ 34 ಎಸೆತಗಳಲ್ಲಿ 50 ರನ್ ಗಳಿಸಿದರು. ಇದು ಐಪಿಎಲ್ 2023ರಲ್ಲಿ ವಿರಾಟ್ ಕೊಹ್ಲಿ ಅವರ ಮೂರನೇ ಅರ್ಧ ಶತಕವಾಗಿದೆ. ಈ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 6 ಬೌಂಡರಿಗಳ ಸಹಿತ 1 ಸಿಕ್ಸರ್ ಬಾರಿಸಿದರು. ಅವರ ಇನ್ನಿಂಗ್ಸ್‌ನಿಂದಾಗಿ ವಿರಾಟ್ ತಮ್ಮ ಹೆಸರಿನಲ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2500 ರನ್ ಪೂರೈಸಿದ ವಿರಾಟ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ಹೊಸ ದಾಖಲೆಯನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ 2500 ಐಪಿಎಲ್ ರನ್‌ಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತವರು ಮೈದಾನವಾದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪೂರ್ಣಗೊಳಿಸಿದ್ದಾರೆ, ಇದು ಐಪಿಎಲ್‌ನಲ್ಲಿ ಒಂದೇ ಸ್ಥಳದಲ್ಲಿ ಯಾವುದೇ ಆಟಗಾರ ಗಳಿಸಿದ ಅತಿ ಹೆಚ್ಚು ರನ್ ಆಗಿದೆ.

ರಾಯಲ್​ ಚಾಲೆಂಜರ್ಸ್​ ಮಾಜಿ ನಾಯಕ ವಿರಾಟ್ ಕೊಹ್ಲಿ 2009 ರಲ್ಲಿ ತಂಡಕ್ಕೆ ಸೇರಿದ್ದಾರೆ. ಅಲ್ಲಿಂದ ವಿರಾಟ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ವಿರಾಟ್ 227 ಪಂದ್ಯಗಳ 219 ಇನ್ನಿಂಗ್ಸ್‌ಗಳಲ್ಲಿ 36.76 ಸರಾಸರಿಯಲ್ಲಿ 6838 ರನ್ ಗಳಿಸಿದ್ದಾರೆ. ಕೊಹ್ಲಿ ಐಪಿಎಲ್‌ನಲ್ಲಿ 47 ಅರ್ಧ ಶತಕ ಮತ್ತು 5 ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಅವರ ಗರಿಷ್ಠ ಸ್ಕೋರ್ 113 ರನ್.

ಅದ್ಭುತ ಫಾರ್ಮ್​ನಲ್ಲಿರುವ ವಿರಾಟ್​: ಈ ಋತುವಿನಲ್ಲಿ ವಿರಾಟ್ ಅವರ ಬ್ಯಾಟ್‌ನಿಂದ ಸಾಕಷ್ಟು ರನ್‌ಗಳು ಹೊರಬರುತ್ತಿವೆ. ಅವರು ಉತ್ತಮ ಫಾರ್ಮ್‌ನಲ್ಲಿ ಕಾಣುತ್ತಿದ್ದಾರೆ. ವಿರಾಟ್ ಆಡಿದ 4 ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ 71.33 ಸರಾಸರಿಯಲ್ಲಿ 214 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ 4 ಇನ್ನಿಂಗ್ಸ್‌ಗಳಲ್ಲಿ 3 ರಲ್ಲಿ ಅರ್ಧಶತಕಗಳನ್ನು ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಅವರು ಮಾಡಿದ ಔಟಾಗದೆ 82 ರನ್ ಅವರ ಅತ್ಯಧಿಕ ಸ್ಕೋರ್ ಆಗಿದೆ. ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ವಿರಾಟ್​ ಎರಡನೇ ಸ್ಥಾನದಲ್ಲಿದ್ದು, ಪಂಕ್ತಿಯಲ್ಲಿ 233 ರನ್ ಗಳಿಸಿರುವ ಶಿಖರ್ ಧವನ್ ಅಗ್ರರಾಗಿದ್ದಾರೆ.

ವಿಶ್ವದ ಪ್ರಸಿದ್ಧ ಆಟಗಾರರ ಪಟ್ಟಿಯಲ್ಲಿ ವಿರಾಟ್​​: 'ರನ್ ಮಷಿನ್' ಮತ್ತು 'ಕಿಂಗ್ ಕೊಹ್ಲಿ' ಎಂದು ವಿಶ್ವದಲ್ಲೇ ಗುರುತಿಸಿಕೊಂಡಿರುವ ವಿರಾಟ್​ಗೆ ಮತ್ತೊಂದು ಗರಿ ಸಿಕ್ಕಿದೆ. ವಿರಾಟ್ ಅತಿ ಕಡಿಮೆ ಸಮಯದಲ್ಲಿ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ತಮ್ಮ ಗುರುತನ್ನು ಮೂಡಿಸಿದ್ದಾರೆ. ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಆಸಕ್ತಿ ತೋರದ ವಿಶ್ವದ ಹಲವು ದೇಶಗಳು ಕೂಡ ವಿರಾಟ್ ಕೊಹ್ಲಿಯ ಅಭಿಮಾನಿಗಳಾಗಿದ್ದು, ಅವರನ್ನು ಅನುಸರಿಸುತ್ತಿದ್ದಾರೆ. ಇತ್ತೀಚೆಗೆ, ವಿಶ್ವದ ಪ್ರಸಿದ್ಧ ಕ್ರೀಡಾ ವೆಬ್‌ಸೈಟ್ SportHubnet ವಿಶ್ವದ ಟಾಪ್-10 ಪ್ರಸಿದ್ಧ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿರಾಟ್​ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ.

ಮೊದಲ ಸ್ಥಾನದಲ್ಲಿ ವಿಶ್ವದ ಅತ್ಯಂತ ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ಎರಡರಲ್ಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತು ಬ್ರೆಜಿಲ್‌ನ ಖ್ಯಾತ ಫುಟ್‌ಬಾಲ್ ಆಟಗಾರ ನೇಮರ್ ಜೂನಿಯರ್ ಮೂರನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:RCB vs DC : ಚಾಲೆಂಜರ್ಸ್​ಗೆ ಮಣಿದ ಕ್ಯಾಪಿಟಲ್ಸ್​, ಗೆಲುವಿನ ಲಯಕ್ಕೆ ಮರಳಿದ ಆರ್​ಸಿಬಿ

ABOUT THE AUTHOR

...view details