ಜೈಪುರ (ರಾಜಸ್ಥಾನ): ಸನ್‌ರೈಸರ್ಸ್ ಹೈದರಾಬಾದ್ ಆಟಗಾರ ಅಬ್ದುಲ್ ಸಮದ್ ಬಗ್ಗೆ ಮಾಜಿ ಕೋಚ್ ಟಾಮ್ ಮೂಡಿ ಭವಿಷ್ಯ ನುಡಿದಿದ್ದಾರೆ. ತಂಡದ 215 ರನ್‌ಗಳ ಬೆನ್ನತ್ತಿದ್ದ ಸಂದರ್ಭದಲ್ಲಿ ಕೊನೆಯ ಓವರ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಅಬ್ದುಲ್ ಸಮದ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ತಂಡ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಪ್ಲೇ-ಆಫ್‌ಗೆ ಕರೆದೊಯ್ಯುವ ಭರವಸೆಯನ್ನು ಜೀವಂತವಾಗಿರಿಸಿದರು. ಕೊನೆಯ ಎಸೆತದಲ್ಲಿ ಹೊಡೆದ ಸಿಕ್ಸರ್ ಅವರ ವೃತ್ತಿಜೀವನದ 'ಟರ್ನಿಂಗ್ ಪಾಯಿಂಟ್' ಎಂದೇ ಹೇಳಬಹುದು.
21ರ ಹರೆಯದ ಯುವ ಆಟಗಾರ ಅಬ್ದುಲ್ ಸಮದ್ ಅವರಿಗೆ ಇದು ನಾಲ್ಕನೇ ಐಪಿಎಲ್ ಸೀಸನ್ ಆಗಿದೆ. ಈ ವರ್ಷ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದಾರೆ. ಇದುವರೆಗೆ ಆಡಿರುವ 30 ಪಂದ್ಯಗಳಲ್ಲಿ ಸ್ಮರಣೀಯ ಪ್ರದರ್ಶನ ನೀಡಲು ಸಾಧ್ಯವಾಗದೇ ಇರಬಹುದು. ಆದರೆ 31ನೇ ಪಂದ್ಯವನ್ನು ಅವರು ಎಂದಿಗೂ ಮರೆಯುವುದಿಲ್ಲ. ಐಪಿಎಲ್‌ನಲ್ಲಿ ಈವರೆಗೆ ಆಡಿದ 31 ಪಂದ್ಯದಲ್ಲಿ ಅವರು ಕೇವಲ 18.63 ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದು, 136.67 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಸಮದ್ ಈವರೆಗೆ ಒಟ್ಟು 20 ಬೌಂಡರಿ ಹಾಗೂ 21 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
2021 ಮತ್ತು 2022 ರಲ್ಲಿ ಸಮದ್ ಅವರೊಂದಿಗೆ ತರಬೇತುದಾರರಾಗಿ ಕೆಲಸ ಮಾಡಿದ ಆಸ್ಟ್ರೇಲಿಯಾದ ಅನುಭವಿ ಟಾಮ್ ಮೂಡಿ ಅವರು ಕ್ರಿಕ್ ಇನ್ಫೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಮತ್ತು ಉದಯೋನ್ಮುಖ ಆಟಗಾರರಾಗಿರುವ ಅಬ್ದುಲ್ ಸಮದ್ ಅವರು ಯೂಸುಫ್ ಪಠಾಣ್ ಅವರಂತಹ ಆಟಗಾರನಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು. ಒತ್ತಡದ ಸಮಯದಲ್ಲಿ ಸರಿಯಾದ ನಿರ್ಧಾರದಲ್ಲಿ ಬ್ಯಾಟಿಂಗ್ ಮಾಡಿ ಅಗತ್ಯ ರನ್ ಕಲೆಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಸ್ವಂತ ಬಲದ ಮೇಲೆ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲರು. ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಮದ್ ಅವರ ಇನ್ನಿಂಗ್ಸ್ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಲಿದೆ ಎಂದು ಟಾಮ್ ಮೂಡಿ ಹೇಳಿದರು.