ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ಅವರ ಅತ್ಯಂತ ಮೆಚ್ಚುಗೆ ಪಡೆದ ಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್, ಬೊಮ್ಮನ್ ಮತ್ತು ಬೆಳ್ಳಿ ದಂಪತಿಯನ್ನು ಭೇಟಿಯಾದರು. ಆಸ್ಕರ್ ವಿಜೇತ ಸಾಕ್ಷ್ಯಚಿತ್ರ ಎಲಿಫೆಂಟ್ ವಿಸ್ಪರರ್ಸ್ ಮೂಲಕ ಪ್ರಸಿದ್ಧರಾದ ಆನೆ ಪಾಲಕರಾದ ಬೊಮ್ಮನ್ ಮತ್ತು ಬೆಳ್ಳಿ ಎಂಬ ನಿಜ ಜೀವನದ ಹೀರೋಗಳಿಗೆ ತಮ್ಮ ಸಿಎಸ್‌ಕೆ ಜೆರ್ಸಿಯನ್ನು ಉಡುಗೊರೆಯಾಗಿ ಧೋನಿ ಈ ವೇಳೆ ನೀಡಿದರು.
ನಿನ್ನೆ ಅಭ್ಯಾಸದ ನಂತರ ಸಣ್ಣ ಅನೌಪಚಾರಿಕ ಕಾರ್ಯಕ್ರಮದಲ್ಲಿ ಸಿಎಸ್‌ಕೆ ತಂಡ ದಿ ಎಲಿಫೆಂಟ್ ವಿಸ್ಪರರ್ಸ್ ತಂಡವನ್ನು ಗೌರವಿಸಿತು. ಮೈದಾನಕ್ಕೆ ಬಂದ ಸಾಕ್ಷ್ಯಚಿತ್ರದ ನಿರ್ದೇಶಕಿ, ಬೊಮ್ಮನ್ ಮತ್ತು ಬೆಳ್ಳಿ ದಂಪತಿಯನ್ನು ಧೋನಿ ಮೈದಾನದಲ್ಲಿ ಸ್ವಾಗತಿಸಿದ್ದು, ಮಗಳು ಝಿವಾಗೆ ಎಲ್ಲರನ್ನೂ ಪರಿಚಯಿಸಿದ್ದಾರೆ. ಮತ್ತೆ ಧೋನಿ ತಮ್ಮ ಜರ್ಸಿಯನ್ನು ಭೇಟಿಯ ನೆನಪಿಗಾಗಿ ಕೊಟ್ಟಿದ್ದಾರೆ.
ಆಸ್ಕರ್ ವೇದಿಕೆಯಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಾಕ್ಷ್ಯಚಿತ್ರದಲ್ಲಿ, ಅನಾಥ ಮರಿ ಆನೆ ರಘುವನ್ನು ನೋಡಿಕೊಳ್ಳಲು ಬೊಮ್ಮನ್ ಮತ್ತು ಬೆಳ್ಳಿ ಅವರಿಗೆ ವಹಿಸಲಾಯಿತು. ಇಬ್ಬರೂ ಗಾಯಗೊಂಡ ಆನೆ ಮರಿಯನ್ನು ಪ್ರೀತಿಯಿಂದ ಮನೆ ಮಗನಂತೆ ಸಾಕುತ್ತಾರೆ. ತಾಯಿಂದ ಬೇರ್ಪಟ್ಟು ದುರ್ಬಲವಾದ ಮರಿಯನ್ನು ಆರೋಗ್ಯಕರವಾಗಿ ಪೋಷಿಸುತ್ತಾರೆ.
ಈ ಸಾಕ್ಷ್ಯಚಿತ್ರವನ್ನು ನಿರ್ಮಾಪಕಿ ಕಾರ್ತಿಕಿ ಗೊನ್ಸಾಲ್ವಿಸ್ ಅವರು ನಿರ್ಮಿಸಿದ್ದರು. 'ಎಲಿಫೆಂಟ್ ವಿಸ್ಪರರ್ಸ್' ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಇದು ಬೊಮ್ಮನ್ ಮತ್ತು ಬೆಳ್ಳಿ ದಂಪತಿಗಳ ಹೋರಾಟ ಮತ್ತು ತ್ಯಾಗವನ್ನು ತೋರಿಸುತ್ತದೆ. ಚಲನಚಿತ್ರ ಕಲೆಯ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿವರಿಸುತ್ತದೆ.