ಹೈದರಾಬಾದ್:ರಾಜಸ್ಥಾನ ತಂಡದ ಮಿಸ್ಟ್ರಿ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರ ದಾಳಿಗೆ ನಲುಗಿದ ಸನ್ ರೈಸರ್ಸ್ 72ರನ್ ಬೃಹತ್ ಅಂತರದ ಸೋಲು ಕಂಡರು. ಟಾಸ್ ಗೆದ್ದು ಬೌಲಿಂಗ್ ಆಯ್ದ ಭುವನೇಶ್ವರ್ ನಿರ್ಧಾರ ಮೊದಲ ಇನ್ನಿಂಗ್ಸ್ನಲ್ಲೇ ವಿಫಲತೆ ಕಂಡಿತು. ರಾಜಸ್ಥಾನ ಬ್ಯಾಟರ್ಗಳು ಹೈದರಾಬಾದ್ ಬೌಲರ್ಗಳನ್ನು ಮನಸೋ ಇಚ್ಚೆ ದಂಡಿಸಿ 204 ರನ್ನ ಬೃಹತ್ ಟಾರ್ಗೆಟ್ ನೀಡಿದರು.
ಈ ಗುರಿಯನ್ನು ಬೆನ್ನು ಹತ್ತಿದ ಹೈದರಾಬಾದ್ ಶೂನ್ಯ ರನ್ಗೆ ಎರಡು ವಿಕೆಟ್ ಕಳೆದುಕೊಂಡಿತು, ಅಲ್ಲಿಂದ ಸನ್ ರೈಸ್ ಆಗಲೇ ಇಲ್ಲ. ಮೊದಲ ಓವರ್ನ್ನು ಬೋಲ್ಟ್ ಮೇಡನ್ ಮಾಡಿ 2 ವಿಕೆಟ್ ಪಡೆದರು. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ 3ನೇ ಬಾಲ್ಗೆ ವಿಕೆಟ್ ಒಪ್ಪಿಸಿದರೆ, 5ನೇ ಬಾಲ್ನಲ್ಲಿ ರಾಹುಲ್ ತ್ರಿಪಾಠಿ ವಿಕೆಟ್ ಒಪ್ಪಿಸಿದರು. ಹೈದರಾಬಾದ್ ಮೊದಲ ಓವರ್ನಲ್ಲೇ ಆಘಾತಕ್ಕೊಳಗಾಯಿತು.
ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅಬ್ದುಲ್ ಸಮದ್ 32 ರನ್ ಗಳಿಸಿ ಪರಿಣಾಮಕಾರಿಯಾಗಿದ್ದು ಬಿಟ್ಟರೆ, ಮಯಾಂಕ್ ಅಗರ್ವಾಲ್ 27, ಆದಿಲ್ ರಷೀದ್ 18, ಉಮ್ರಾನ್ ಮಲಿಕ್ 19 ಮತ್ತು ಹ್ಯಾರಿ ಬ್ರೂಕ್ 13 ರನ್ ಗಳಿಸಿದರು. ಬಾಕಿ ಯಾರೂ ಪರಿಣಾಮಕಾರಿ ಬ್ಯಾಟಿಂಗ್ ಮಾಡಲಿಲ್ಲ. 20 ಓವರ್ ಅಂತ್ಯ ಸನ್ ರೈಸರ್ಸ್ 8 ವಿಕೆಟ್ಗೆ 131 ರನ್ ಗಳಿಸಷ್ಟೇ ಶಕ್ತವಾಯಿತು. ಇದರಿಂದ 72 ರನ್ನ ಸೋಲನುಭವಿಸಿತು.
ಮೊದಲ ಇನ್ನಿಂಗ್ಸ್:ಆರಂಭಿಕರಾದಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅಕರ್ಷಕ ಅರ್ಧಶತಕದ ನೆರೆವಿನಿಂದ 16ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ 200 + ಗುರಿ ನೀಡಲಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡದ ಮೂವರ ಬ್ಯಾಟರ್ಗಳು ಅದ್ಭುತ ಇನ್ನಿಂಗ್ಸ್ ಕಟ್ಟಿದರು. ನಂತರದ ಬ್ಯಾಟಿಂಗ್ ವೈಫಲ್ಯ ಕಂಡರೂ ಆರ್ಆರ್ 20 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿತು.
ಪವರ್ ಪ್ಲೇಯಲ್ಲಿ ಉತ್ತಮ ರನ್ ಗಳಿಕೆ ಮಾಡಿದ ಆರ್ ಆರ್:ಪವರ್-ಪ್ಲೇಯಲ್ಲಿ ರಾಜಸ್ಥಾನ ತಂಡ ಅತಿ ಹೆಚ್ಚಿನ ರನ್ ಕಲೆ ಹಾಕಿದ ದಾಖಲೆ ಮಾಡಿದೆ. ಮೊದಲ ಆರು ಓವರ್‌ಗಳಲ್ಲಿ ಆರ್ಆರ್ ಒಂದು ವಿಕೆಟ್ ನಷ್ಟದಲ್ಲಿ 85 ರನ್ ಕಲೆಹಾಕಿತು. ಈ ಹಿಂದೆ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 81 ರನ್ ಗಳಿಸಿದ್ದು ಉತ್ತಮ ಸ್ಕೋರ್ ಆಗಿತ್ತು.