ಹೈದರಾಬಾದ್:ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಣ ಪಂದ್ಯದಲ್ಲಿ ಹಲವಾರು ದಾಖಲೆಗಳು ನಿರ್ಮಾಣ ಆದರು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಭುವನೇಶ್ವರ್ ಪಡೆಗೆ 204 ರನ್ ಬೃಹತ್ ಗುರಿ ನೀಡಿತು. 16ನೇ ಆವೃತ್ತಿಯಲ್ಲಿ 200+ ರನ್ ದಾಟಿದ ಮೊದಲ ಪಂದ್ಯ ಇದಾಗಿದೆ.
ಸಲೀಂ ದುರಾನಿಗೆ ಗೌರವ:ಭಾರತದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಅವರ ನಿಧನದ ಹಿನ್ನೆಲೆ ಪಂದ್ಯಾರಂಭಕ್ಕೂ ಮುನ್ನ ಮೌನಾಚರಣೆ ಮಾಡಲಾಯಿತು. ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ಆಟಗಾರರು ಮತ್ತು ತರಬೇತುದಾರರು, ಪಂದ್ಯದ ಅಧಿಕಾರಿಗಳು, ಅನುಭವಿ ಆಲ್‌ರೌಂಡರ್‌ಗೆ ಗೌರವ ಸಲ್ಲಿಸಲು ಪಂದ್ಯದ ಮೊದಲು ಒಂದು ನಿಮಿಷ ಮೌನ ಆಚರಿಸಿದರು. ದಿವಂಗತ ಭಾರತೀಯ ಕ್ರಿಕೆಟಿಗನಿಗೆ ಗೌರವ ಸೂಚಕವಾಗಿ ಎಲ್ಲಾ ಆಟಗಾರರು ತೋಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ಕಣಕ್ಕಿಳಿದರು.
ದಾಖಲೆಯ ಪವರ್-ಪ್ಲೇ ರನ್: ರಾಜಸ್ಥಾನ ರಾಯಲ್ಸ್ ತಂಡ ಈ ಪಂದ್ಯದಲ್ಲಿ ಆರು ಓವರ್ ಮುಕ್ತಾಯದ ವೇಳೆಗೆ ಒಂದು ವಿಕೆಟ್ ನಷ್ಟದಿಂದ 85 ರನ್ ಗಳಿಸಿತ್ತು. ಇದು ಪವರ್-ಪ್ಲೇ ಸಮಯದ ರಾಜಸ್ಥಾನ ರಾಯಲ್ಸ್ನ ಅತಿ ಹೆಚ್ಚಿನ ರನ್ ಆಗಿದೆ. ಈ ಹಿಂದೆ ದುಬೈನಲ್ಲಿ ಚೆನ್ನೈ ವಿರುದ್ಧ 81 ರನ್ ಗಳಿಸಿತ್ತು. ಆದರೆ ಒಟ್ಟಾರೆ ಐಪಿಎಲ್ನಲ್ಲಿ ಪವರ್-ಪ್ಲೇ ವೇಳೆ ಅತಿ ಹೆಚ್ಚು ರನ್ ಗಳಿಸಿದ ತಂಡ ಕೆಕೆಆರ್ ಆಗಿದೆ. 2017ರಲ್ಲಿ ಆರ್ಸಿಬಿ ವಿರುದ್ಧ ವಿಕೆಟ್ ನಷ್ಟವಿಲ್ಲದೇ 105 ರನ್ ಗಳಿಸಿತ್ತು.