ಹೈದರಾಬಾದ್ (ತೆಲಂಗಾಣ):ಐಪಿಎಲ್ನ 25ನೇ ಪಂದದಲ್ಲಿಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 14 ರನ್ಗಳ ಗೆಲುವು ಸಾಧಿಸಿದೆ. ಈ ಮೂಲಕ ರೋಹಿತ್ ಶರ್ಮಾ ಪಡೆ ತಾನು ಆಡಿದ ಐದು ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಜಿಗಿದಿದೆ.
ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಐದು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಹೈದರಾಬಾದ್ ಉತ್ತಮ ಆರಂಭ ಪಡೆಯಲಿಲ್ಲ. ಹ್ಯಾರಿ ಬ್ರೂಕ್ (9) ಮತ್ತು ರಾಹುಲ್ ತ್ರಿಪಾಠಿ (7) ಬೇಗ ವಿಕೆಟ್ ಒಪ್ಪಿಸಿದರು.
ನಂತರದಲ್ಲಿ ಮಯಾಂಕ್ ಅಗರ್ವಾಲ್ ಜೊತೆಗೂಡಿದ ನಾಯಕ ಐಡೆನ್ ಮಾರ್ಕ್ರಾಮ್ 22 ರನ್ ಬಾರಿಸಿ ಔಟಾದರು. ಅಭಿಷೇಕ್ ಶರ್ಮಾ 1 ರನ್ಗೆ ಪೆವಿಲಿಯನ್ ಸೇರಿದರು. ಬಳಿಕ ಬಂದ ಹೆನ್ರಿಚ್ ಕ್ಲಾಸೆನ್ 36 ರನ್ ಸಿಡಿಸಿ ಮಯಾಂಕ್ ಅವರೊಂದಿಗೆ 55 ರನ್ಗಳ ಜೊತೆಯಾಟ ನೀಡಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ 48 ರನ್ ಗಳಿಸಿದ್ದ ಮಯಾಂಕ್ ಕೂಡ ಔಟಾದರು. ಆದರೆ, ನಂತರ ಯಾವ ಬ್ಯಾಟರ್ನಿಂದ ನಿರೀಕ್ಷಿತ ರನ್ ಬರಲಿಲ್ಲ. ಮಾರ್ಕೊ ಜಾನ್ಸೆನ್ (13), ವಾಷಿಂಗ್ಟನ್ ಸುಂದರ್ (10), ಅಬ್ದುಲ್ ಸಮದ್ (9), ಭುವನೇಶ್ವರ್ ಕುಮಾರ್ (2) ಮತ್ತು ಮಯಾಂಕ್ ಮಾರ್ಕಂಡೆ 2* ರನ್ ಬಾರಿಸಿದರು. ಈ ಮೂಲಕ ಇನ್ನಿಂಗ್ನ ಒಂದು ಬಾಲ್ ಬಾಕಿ ಇರುವಾಗಲೇ ಹೈದರಾಬಾದ್ 178 ರನ್ಗೆ ಸರ್ವಪತನವಾಯಿತು.
ಮುಂಬೈ ಪರ ಜೇಸನ್ ಬೆಹ್ರೆನ್ಡಾರ್ಫ್, ರಿಲೆ ಮೆರೆಡಿತ್ ಮತ್ತು ಪಿಯೂಷ್ ಚಾವ್ಲಾ ತಲಾ ಎರಡು ವಿಕೆಟ್ ಹಾಗೂ ಅರ್ಜುನ್ ತೆಂಡೂಲ್ಕರ್, ಕ್ಯಾಮೆರಾನ್ ಗ್ರೀನ್ ತಲಾ ಒಂದು ವಿಕೆಟ್ ಪಡೆದರು.