ಲಕ್ನೋ (ಉತ್ತರ ಪ್ರದೇಶ): ಕೆಎಲ್ ರಾಹುಲ್ ತಮ್ಮ ನಾಯಕತ್ವದ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ. ಪಂಜಾಬ್ ನಾಯಕ ಸ್ಯಾಮ್ ಕರನ್ ಏಳು ಜನ ಬೌಲರ್ಗಳಿಂದ ಸೂಪರ್ ಜೈಂಟ್ಸ್ನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದರು. ಶಿಖರ್ ರಹಿತ ಪಂಜಾಬ್ ತಂಡ ಗೆಲುವಿಗೆ 160 ರನ್ಗಳನ್ನು ಗಳಿಸಬೇಕಾಗಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಬಂದ ಲಕ್ನೋ ಸೂಪರ್ ಜೈಂಟ್ಸ್ ನಿದಾನಗತಿಯ ಆರಂಭ ಪಡೆಯಿತು. ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಕೈಲ್ ಮೇಯರ್ಸ್ 50 ರನ್ ಜೊತೆಯಾಟ ಮಾಡಿದರು. 29 ರನ್ ಗಳಿಸಿದ್ದ ಕೈಲ್ ಮೇಯರ್ಸ್ ಹರ್‌ಪ್ರೀತ್ ಬ್ರಾರ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ದೀಪಕ್ ಹೂಡಾ (2), ಕೃನಾಲ್ ಪಾಂಡ್ಯ (18), ನಿಕೋಲಸ್ ಪೂರನ್ (0), ಮಾರ್ಕಸ್ ಸ್ಟೊಯಿನಿಸ್ (15), ಕೃಷ್ಣಪ್ಪಾ ಗೌತಮ್ (1), ಯುಧ್ವೀರ್ ಸಿಂಗ್ ಚರಕ್ (0) ಬೇಗ ಔಟ್ ಆದರು.
4000 ರನ್ ಪೂರೈಸಿದ ರಾಹುಲ್:ಐಪಿಎಲ್ನಲ್ಲಿ ಕೆಎಲ್ ರಾಹುಲ್ 4000 ರನ್ ಗಡಿ ಮುಟ್ಟಿದರು. ಇಂದಿನ ಇನ್ನಿಂಗ್ಸ್ನಲ್ಲಿ 56 ಬಾಲ್ನ್ನು ಎದುರಿಸಿದ ರಾಹುಲ್ 8 ಬೌಂಡರಿ ಮತ್ತು ಒಂದು ಸಿಕ್ಸ್ನಿಂದ 74 ರನ್ ಗಳಿಸಿದರು. ಕಡಿಮೆ ಇನ್ನಿಂಗ್ಸ್ನಲ್ಲಿ 4000 ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಒಳಗಾದರು. ರಾಹುಲ್ 105 ಇನ್ನಿಂಗ್ಸನಲ್ಲಿ ಈ ದಾಖಲೆ ಮಾಡಿದ್ದಾರೆ ಇದಕ್ಕೂ ಮೊದಲು ಕ್ರಿಸ್ ಗೇಲ್ (112), ಡೇವಿಡ್ ವಾರ್ನರ್ (114), ವಿರಾಟ್ ಕೊಹ್ಲಿ (128) ಮತ್ತು ಎಬಿ ಡಿ ವಿಲಿಯರ್ಸ್ (131) ಈ ಸಾಧನೆ ಮಾಡಿದ್ದರು.
ಪಂಜಾಬ್ ಪರ ಸ್ಯಾಮ್ ಕರನ್ 3, ಕಗಿಸೊ ರಬಾಡ 2 ಮತ್ತು ಅರ್ಶ್‌ದೀಪ್ ಸಿಂಗ್, ಸಿಕಂದರ್ ರಜಾ, ಹರ್‌ಪ್ರೀತ್ ಬ್ರಾರ್ ತಲಾ ಒಂದು ವಿಕೆಟ್ ಪಡೆದರು.