ಚೆನ್ನೈ (ತಮಿಳುನಾಡು): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗುತ್ತಿದೆ. ಇದು ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತವರು ಈ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಗೆದ್ದವರು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ನ್ನು ಎದುರಿಸಬೇಕಾಗುತ್ತದೆ. ಇಂದು ಚೆಪಾಕ್ನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಚೆನ್ನೈನ ಎಂ ಎ ಚಿದಂಬರಮ್ ಕ್ರೀಡಾಂಗಣದಲ್ಲಿ ನಿನ್ನೆ ಚೆನ್ನೈ ಮತ್ತು ಗುಜರಾತ್ ನಡುವೆ ಮೊದಲ ಕ್ವಾಲಿಫೈಯರ್ ನಡೆದಿತ್ತು. ಟಾಸ್ ಗೆದ್ದು ಗುಜರಾತ್ ಬೌಲಿಂಗ್ ತೆಗೆದುಕೊಂಡು ಗುರಿ ಸಾಧಿಸುವಲ್ಲಿ ವಿಫಲವಾಗಿತ್ತು. ಈ ಲೆಕ್ಕಾಚಾರವನ್ನು ಗಮನಿಸಿದ ಮುಂಬೈ ಕ್ಯಾಪ್ಟನ್ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ಗೆ ಮುಂದಾಗಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಕಾರ್ತಿಕೇಯ ಬದಲಾಗಿ ಹೃತಿಕ್ ಶೋಕೀನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ನಾಯಕ ಯಾವುದೇ ಬದಲಾವಣೆಗಳ ಬಗ್ಗೆ ಪ್ರಸ್ತಾಪಿಸಿಲ್ಲ.
ಲೀಗ್ನಲ್ಲಿ ಏರಿಳಿತಗಳನ್ನು ಕಂಡು, ಆರ್ಸಿಬಿ ಗುಜರಾತ್ ವಿರುದ್ಧ ಸೋಲನುಭವಿಸಿದ್ದರಿಂದ ಪ್ಲೇ ಆಫ್ ಪ್ರವೇಶ ಪಡೆದುಕೊಂಡ ಮುಂಬೈ ಇಂಡಿಯನ್ಸ್ 6ನೇ ಕಪ್ ಗೆಲ್ಲಲು ಬೇಕಿರುವ ಮೂರು ಹೆಜ್ಜೆಗಳಲ್ಲಿ ಮೊದಲನೇಯದ್ದನ್ನು ಬಲವಾಗಿ ಊರಲು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಜಿಯೋ ಸಿನಿಮಾದ ಜೊತೆ ಮಾತನಾಡಿದ ರೋಹಿತ್ ಶರ್ಮಾ, "ಆಟಗಾಗರರ ಮೇಲೆ ನಂಬಿಕೆ ಇಡಬೇಕು, ಹಾಗೇ ಅವರಿಗೆ ನಂಬಿಕೆಯನ್ನು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ತಂಡ ನಿಂತಿದೆ. ಅವರಿಗೆ ಮುಕ್ತವಾಗಿ ಇರಲು ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದಿದ್ದಾರೆ.