ಕೋಲ್ಕತ್ತಾ (ಪಶ್ಚಿಮ ಬಂಗಾಳ):ಇಂದು ಸಂಜೆ ಈಡನ್ ಗಾರ್ಡನ್ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಐಪಿಎಲ್ ಪಂದ್ಯ ನಡೆಯಲಿದ್ದು, ಎರಡೂ ತಂಡಗಳು ಪರಸ್ಪರ ಜಯದ ಪಥ ಮುಂದುವರೆಸಿಕೊಂಡು ಹೋಗಲು ಕಾತರಿಸುತ್ತಿವೆ. ಇತ್ತಂಡಗಳೂ ತಲಾ ಮೂರು ಪಂದ್ಯಗಳನ್ನು ಆಡಿವೆ. ಈ ಪೈಕಿ ಕೆಕೆಆರ್ ಮೊದಲ ಪಂದ್ಯವನ್ನು ಮಳೆಯಿಂದ ಕಳೆದುಕೊಂಡಿತು. ನಂತರದ ಎರಡರಲ್ಲಿ ರೋಚಕ ಗೆಲುವು ಸಾಧಿಸಿತು. ಹೈದರಾಬಾದ್ ತಂಡ ಎರಡರಲ್ಲಿ ಸೋತು, ಕಳೆದ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿದೆ.
ಕೆಕೆಆರ್ ತಂಡವನ್ನು ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಪರಾಕ್ರಮ ದಡ ಸೇರಿಸಿದರೆ, ಗುಜರಾತ್ ವಿರುದ್ಧ ರಿಂಕು ಸಿಂಗ್ ಅಬ್ಬರದಿಂದ ಗೆಲುವು ದೊರೆತಿತ್ತು. ತಂಡದ ಎಲ್ಲಾ ಆಟಗಾರರು ಫಾರ್ಮ್ನಲ್ಲಿರುವುದು ಕೋಲ್ಕತ್ತಾ ತಂಡದ ಬಲ. ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣ, ರಿಂಕು ಸಿಂಗ್ ಮತ್ತು ಶಾರ್ದೂಲ್ ಠಾಕೂರ್ ರನ್ ಕಲೆ ಹಾಕುತ್ತಿದ್ದಾರೆ. ಕೆರಿಬಿಯನ್ ಆಟಗಾರ ಆಂಡ್ರೆ ರಸೆಲ್ ಇನ್ನೂ ಲಯಕ್ಕೆ ಬಂದಿಲ್ಲ. ಅವರೂ ಫಾರ್ಮ್ಗೆ ಬಂದರೆ ತಂಡ ಇನ್ನಷ್ಟೂ ಬಲಿಷ್ಟವಾಗಲಿದೆ.
ಬ್ಯಾಟಿಂಗ್ನಲ್ಲಿ ಬಲಗೊಳ್ಳಬೇಕು ಎಸ್ಆರ್ಹೆಚ್:ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಎದುರಾಳಿಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರೂ, ಅದನ್ನೂ ಸಾಧಿಸುವಲ್ಲಿ ವಿಫಲವಾಗುತ್ತಿದೆ. ತಂಡದ ಬ್ಯಾಟರ್ಗಳಿಂದ ಬೃಹತ್ ಜೊತೆಯಾಟ ಬಾರದೇ ಇರುವುದು ತಂಡಕ್ಕೆ ಮೈನಸ್ ಆಗಿದೆ. ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ ಮತ್ತು ಐಡೆನ್ ಮಾರ್ಕ್ರಾಮ್ರಂತಹ ಬ್ಯಾಟರ್ಗಳು ರನ್ ಕಲೆಹಾಕುವಲ್ಲಿ ಎಡವುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಎಸ್ಆರ್ಹೆಚ್ 145 ರನ್ ಗುರಿ ಸಾಧಿಸಲು 18 ಓವರ್ ತೆಗೆದುಕೊಂಡಿತ್ತು.
ಕೆಕೆಆರ್ ಸೇರಿದ ರಾಯ್, ಲಿಟನ್: ಕೋಲ್ಕತ್ತಾ ನೈಟ್ ರೈಡರ್ಸ್ ಆರಂಭಿಕ ಆಟಗಾರರನ್ನು ಬದಲಿಸಬೇಕಾಗಬಹುದು. ರಹಮಾನುಲ್ಲಾ ಗುರ್ಬಾಜ್ ಇದುವರೆಗೆ ಮೂರು ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಿದ್ದಾರೆ. ಜೇಸನ್ ರಾಯ್ ಮತ್ತು ಲಿಟನ್ ದಾಸ್ ತಂಡಕ್ಕೆ ಸೇರಿದ್ದರಿಂದ ಈ ಜೋಡಿ ಇಂದು ಆರಂಭಿಕರಾಗಿ ಕಣಕ್ಕಿಳಿದರೂ ಅಚ್ಚರಿಯೇನಿಲ್ಲ. ಆದರೆ ಈಗಾಗಲೇ ಉತ್ತಮ ಪ್ರದರ್ಶನ ನೀಡಿದವರಿಗೆ ಕೊಕ್ ಕೊಡುತ್ತಾರಾ ಅಥವಾ ಅವರನ್ನೇ ಮುಂದುವರೆಸುತ್ತಾರಾ ಎಂಬುದು ಟಾಸ್ ನಂತರವೇ ತಿಳಿಯಲಿದೆ.