ಚೆನ್ನೈ (ತಮಿಳುನಾಡು):16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ವಿಜೇತರು ಯಾರು ಎಂದು ತಿಳಿಯಲು ಇನ್ನೂ ಕೇವಲ ನಾಲ್ಕು ಪಂದ್ಯಗಳು ಮಾತ್ರ ಬಾಕಿ ಇವೆ. ಲೀಗ್ ಹಂತದ ಪಂದ್ಯಗಳು ಮುಗಿದ ನಂತರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ಮುಖಾಮುಖಿಯಾಗಿವೆ. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದ್ದಾರೆ. ಜಿಟಿ ಒಂದು ಬದಲಾವಣೆ ಮಾಡಿಕೊಂಡಿದ್ದು, ಯಶ್ ದಯಾಳ್ ಸ್ಥಾನದಲ್ಲಿ ದರ್ಶನ್ ನಲ್ಕಂಡೆ ಅವರನ್ನು ಆಡಿಸುತ್ತಿದ್ದಾರೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಇಂದು ಪಂದ್ಯ ನಡೆಯುತ್ತಿದ್ದು, ತಲೈವಾ ಧೋನಿ ನಾಯಕತ್ವದ ಸಿಎಸ್ಕೆಗೆ ತವರು ಮೈದಾನವಾಗಿದೆ. ಇದೇ ಲಾಭವನ್ನು ಹಳದಿ ಪಡೆ ಬಳಸಿಕೊಳ್ಳಲು ನೋಡುತ್ತಿದೆ. ಇನ್ನು, ಚೆನ್ನೈ ಮೇಲೆ ಇದುವರೆಗೆ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಗುಜರಾತ್ ಟೈಟಾನ್ಸ್ ಅದೇ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕಿದಿದೆ.
ಕಳೆದ ಬಾರಿ ಚಾಂಪಿಯನ್ ಆಗಿದ್ದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್, ಈ ಆವೃತ್ತಿಯಲ್ಲಿ ಹೋದ ವರ್ಷದ ಚಾಂಪಿಯನ್ ಆಟದ ಚಾರ್ಮನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಲೀಗ್ ಹಂತದಲ್ಲಿ ಕೇವಲ ನಾಲ್ಕು ಸೋಲನ್ನು ಮಾತ್ರ ಕಂಡಿರುವ ಗುಜರಾತ್, ಇಂದು ಗೆದ್ದು ನೇರ ತವರಿನಲ್ಲಿ ಫೈನಲ್ ಆಡುವ ಬಗ್ಗೆ ಯೋಚಿಸುತ್ತಿದೆ.
ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 9 ಬಾರಿ ಫೈನಲ್ ಪ್ರವೇಶ ಪಡೆದಿದ್ದು, ನಾಲ್ಕು ಬಾರಿ ಕಪ್ ಗೆದ್ದುಕೊಂಡ ಇತಿಹಾಸ ಹೊಂದಿದೆ. ಕಳೆದ ವರ್ಷ ಹಳದಿ ಜರ್ಸಿ ಪಡೆ ಕಳಪೆ ಆಟದ ಪ್ರದರ್ಶನದಿಂದ ಅಂಕಪಟ್ಟಿಯ ತಳಮಟ್ಟದಲ್ಲಿತ್ತು. ಇಂದು ಸಿಎಸ್ಕೆ ಪಂದ್ಯ ಗೆದ್ದಲ್ಲಿ 10ನೇ ಬಾರಿಗೆ ಫೈನಲ್ ಪ್ರವೇಶಿಸಿದಂತಾಗುತ್ತದೆ. ಧೋನಿ ಇದೇ ಸಾಧ್ಯತೆಗಳನ್ನು ಮೈದಾನದ ಪಿಚ್ನಲ್ಲಿ ಹುಡುಕಲಿದ್ದಾರೆ ಎಂಬುದು ಖಚಿತ.