ಅಹಮದಾಬಾದ್ (ಗುಜರಾತ್):ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದು, ಕೊನೆಗೆ ಐದು ಓವರ್ನ ಪಂದ್ಯವನ್ನಾದರೂ ನೋಡಲು ಸಿಗುತ್ತದೆಯೇ ಎಂದು ಅಭಿಮಾನಿಗಳು ಕಾಯುವಂತಾಗಿದೆ. ಆದರೆ ಮಳೆ ಎಡೆ ಬಿಡದೇ ಸುರಿಯುತ್ತಿದೆ. ಇದರಿಂದ1,32,000 ಪ್ರೇಕ್ಷಕರು ಇಂದು ನಿರಾಸೆ ಅನುಭವಿಸಿದ್ದಾರೆ.
ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಣ ಫೈನಲ್ ಪಂದ್ಯಕ್ಕೆ ವರುಣ ಕಾಡಿದ್ದಾನೆ. ಟಾಸ್ಗೆ ಇನ್ನು ಕೆಲವೇ ಕ್ಷಣ ಇದೆ ಎನ್ನುವಾಗ ಆರಂಭವಾದ ಮಳೆ 10:30 ಆದರೂ ಬಿಡಲಿಲ್ಲ. ರಾತ್ರಿ 12.06 ನಿಮಿಷದ ವರೆಗೂ ಪಂದ್ಯವನ್ನು ರದ್ದು ಮಾಡದೇ 5 ಓವರ್ನ ಪಂದ್ಯವನ್ನಾದರೂ ಆಡಿಸುವ ಅವಕಾಶಕ್ಕೆ ಐಪಿಎಲ್ ಕಮಿಟಿ ಎದುರು ನೋಡುತ್ತಿದೆ. ಒಂದು ವೇಳೆ ಇಂದು ರಾತ್ರಿ 12 ಆದರೂ ಮಳೆ ಬಿಡದಿದ್ದಲ್ಲಿ ಪಂದ್ಯವನ್ನು ನಾಳಿನ ಮೀಸಲು ದಿನಕ್ಕೆ ಮಂದೂಡಲಾಗುತ್ತದೆ. ಆದರೆ ಗಿಲ್, ರಶೀದ್ ಖಾನ್, ಹಾರ್ದಿಕ್ ಪಾಂಡ್ಯ, ಧೋನಿ, ದುಬೆ ಅವರ ಆಟವನ್ನು ನೋಡಲು ಬಂದ ಅಭಿಮಾನಿಗಳ ಆಸೆ ಮಳೆಯಲ್ಲಿ ಕೊಚ್ಚಿಹೋಗಿದೆ.
ಉಭಯ ತಂಡಗಳ ಫೈನಲ್ ಹಾದಿ..:ಕಳೆದ ವರ್ಷ ಕಳಪೆ ಪ್ರದರ್ಶನದಿಂದ ಲೀಗ್ ಹಂತದಲ್ಲೇ ಹೊರಗುಳಿದು ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ವರ್ಷ ಫೀನಿಕ್ಸ್ನಂತೆ ಮೇಲೆದ್ದು ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಧೋನಿ ನಾಯಕತ್ವದ ಅಡಿಯಲ್ಲಿ 6 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ಆಟಗಾರರನ್ನು ಆಡಿಸಿಕೊಂಡು ಫೈನಲ್ಗೆ ಪ್ರವೇಶ ಪಡೆದಿದೆ. ಈ ಬಾರಿಯ ಲೀಗ್ನಲ್ಲಿ ಹೆಚ್ಚು ಅನ್‌ಕ್ಯಾಪ್ ಆಟಗಾರರು ಆಡುತ್ತಿರುವುದು ಸಿಎಸ್ಕೆ ತಂಡದಲ್ಲೇ ಎಂಬುದು ಗಮನಾರ್ಹ. ಆದರೆ ಧೋನಿಯ ಚಾಣಾಕ್ಷ ನಿಲುವುಗಳು ಮತ್ತು ಅವರೊಂದಿಗೆ ಯುವ ಆಟಗಾರರು ನೀಡುತ್ತಿರುವ ಪ್ರದರ್ಶನದಿಂದಾಗಿ ತಂಡ ಕಪ್ ಗೆಲ್ಲುವ ರೇಸ್ನಲ್ಲಿ ನೆಚ್ಚಿನ ತಂಡವಾಗಿದೆ.