ಮುಂಬೈ:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಟೂರ್ನಿಯಲ್ಲಿ ಉಳಿದ ಪಂದ್ಯಗಳಿಂದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಹೊರಬಿದ್ದಿದ್ದಾರೆ. ಎಡಗೈ ನೋವಿನ ತೊಂದರೆಗೊಳಗಾಗಿರುವ ಸೂರ್ಯಕುಮಾರ್ ಮುಂದಿನ ಪಂದ್ಯಗಳಲ್ಲಿ ಮುಂಬೈ ತಂಡಕ್ಕೆ ಅಲಭ್ಯರಾಗಲಿದ್ದು, ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.
ಮೇ. 6ರಂದು ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಗಾಯಕ್ಕೊಳಗಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮುಂಬೈ ಇಂಡಿಯನ್ಸ್, ಬಿಸಿಸಿಐ ವೈದ್ಯಕೀಯ ತಂಡದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಂಬೈ ಫ್ರಾಂಚೈಸಿ ತಿಳಿಸಿದೆ.