ಹೈದರಾಬಾದ್: ಸತತ ಸೋಲುಗಳಿಂದ ಕಂಗೆಟ್ಟಿರುವ ಸನ್ ರೈಸರ್ಸ್ ಹೈದರಾಬಾದ್ ಇಂದು ಮೊದಲ ಗೆಲುವಿಗಾಗಿ ಹಂಬಲಿಸುತ್ತಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಪಂಜಾಬ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಸೆಣಸಾಟ ನಡೆಯಲಿದೆ. ಕಳೆದೆರಡು ಪಂದ್ಯದಲ್ಲಿನ ಬ್ಯಾಟಿಂಗ್ ವೈಫಲ್ಯದಿಂದ ಹೊರಬರಲು ರೈಸರ್ಸ್ ಹವಣಿಸುತ್ತಿದೆ.
ಕಳೆದೆರಡು ಸೀಸನ್ನಲ್ಲಿಯೂ 8ನೇ ಸ್ಥಾನದಲ್ಲೇ ಉಳಿದುಕೊಂಡಿರುವ ಎಸ್ಆರ್ಹೆಚ್ ಈ ವರ್ಷ ಉತ್ತಮ ಆರಂಭದ ನಿರೀಕ್ಷೆಯಲ್ಲಿತ್ತು. ಆದರೆ ರಾಜಸ್ಥಾನ ರಾಯಲ್ಸ್ ಎದುರು ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೋತಿದ್ದಲ್ಲದೇ, ಲಕ್ನೋ ಸೂಪರ್ ಜೈಂಟ್ಸ್ ಎರಡನೇ ಹೀನಾಯ ಸೋಲು ಕಂಡು ಕಡಿಮೆ ರನ್ ರೇಟ್ನಿಂದ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
ಬ್ಯಾಟಿಂಗ್ನಲ್ಲಿ ಚೇತರಿಸಿಕೊಳ್ಳದ ಎಸ್ಆರ್ಹೆಚ್:ಹೈದರಾಬಾದ್ ತಂಡ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಬ್ಯಾಟಿಂಗ್ನಲ್ಲಿ ಅಬ್ಬರಿಸುತ್ತಿಲ್ಲ. ಎರಡನೇ ಪಂದ್ಯಕ್ಕೆ ನಾಯಕರಾಗಿ ಐಡೆನ್ ಮಾರ್ಕ್ರಾಮ್ ಸೇರಿಕೊಂಡ ನಂತರ ತಂಡದ ಬ್ಯಾಟಿಂಗ್ಗೆ ಬಲ ಬರಲಿದೆ ಎಂದು ಭರವಸೆ ಇತ್ತು. ಆದರೆ ಕಳೆದ ಪಂದ್ಯದಲ್ಲಿ ನಾಯಕ ಶೂನ್ಯಕ್ಕೆ ಔಟಾಗಿ ನಿರೀಕ್ಷೆ ಹುಸಿಗೊಳಿಸಿದರು.
ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್‌ರಿಂದ ಬೃಹತ್ ಜೊತೆಯಾಟದ ನಿರೀಕ್ಷೆ ಇದ್ದು ಎರಡೂ ಪಂದ್ಯದಲ್ಲಿಯ ನಿರೀಕ್ಷೆ ಈಡೇರಲಿಲ್ಲ. ಮೊದಲ ಪಂದ್ಯದಲ್ಲಿ ಅಭಿಷೇಕ್ ಡಕ್ ಔಟ್ ಆದರೆ, ಎರಡನೇ ಪಂದ್ಯದಲ್ಲಿ ಅಗರ್ವಾಲ್ 8 ರನ್ ವಿಕೆಟ್ ನೀಡಿದರು. ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲೂ ಯಾವ ಬ್ಯಾಟರ್ಗಳು ಟಿ20 ಬ್ಯಾಟಿಂಗ್ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ತಂಡಕ್ಕೆ 130 ರನ್ ಗಡಿ ದಾಟಲು ಸಾಧ್ಯವಾಗುತ್ತಿಲ್ಲ.
ವಿದೇಶಿಗರಿಗೆ ಮಣೆ ಹಾಕುವ ಸಾಧ್ಯತೆ:ಹೆನ್ರಿಚ್ ಕ್ಲಾಸೆನ್ ಮತ್ತು ಮಾರ್ಕೊ ಜಾನ್ಸೆನ್ ಇಂದಿನ ಪಂದ್ಯದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೆನ್ರಿಚ್ ಕ್ಲಾಸೆನ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ನಿರ್ವಹಣೆ ಮಾಡಲಿದ್ದು, ಮಾರ್ಕೊ ಜಾನ್ಸೆನ್ ಬೌಲಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ರನ್ ಕಲೆ ಹಾಕಬಲ್ಲರು.