ಹೈದರಾಬಾದ್ (ತೆಲಂಗಾಣ): ಐಪಿಎಲ್ 2023ರ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಎರಡೂ ತಂಡಗಳು ಇಂದು ಮುಖಾಮುಖಿಯಾಗಲಿವೆ. ಸನ್‌ರೈಸರ್ಸ್ ಹೈದರಾಬಾದ್ ಆಡಿರುವ ಆರರಲ್ಲಿ ಎರಡನ್ನು ಮಾತ್ರ ಗೆದ್ದು ಕೊಂಡಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಪಂದ್ಯದಲ್ಲಿ ಕೆಕೆಆರ್ ಮಣಿಸಿ ಮೊದಲ ಜಯ ದಾಖಲಿಸಿದೆ. ಈ ಆವೃತ್ತಿಯಲ್ಲಿ ಕ್ವಾಲಿಫೈ ಆಗಲು ಎರಡೂ ತಂಡಕ್ಕೆ ಮುಂದಿನ ಎಲ್ಲ ಪಂದ್ಯಗಳ ಗೆಲುವು ಅನಿವಾರ್ಯವಾಗಿದೆ. ಡೆಲ್ಲಿ ಕಳೆದ ಪಂದ್ಯದ ಗೆಲುವಿನ ಲಯ ಮುಂದುವರೆಸಲು ನೋಡುತ್ತಿದ್ದರೆ, ಸನ್ ರೈಸರ್ಸ್ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ಚಿಂತಿಸುತ್ತಿದೆ.
ಮೊದಲ ಪಂದ್ಯದಿಂದಲೂ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸುತ್ತಾ ಬಂದಿರುವ ಡೆಲ್ಲಿ ಕ್ಯಾಪಿಟಲ್ಸ್ಗೆ ರನ್ ಕಲೆ ಹಾಕುವುದೇ ದೊಡ್ಡ ಸವಾಲಾಗಿದೆ. ತಂಡ ರನ್ ಗಳಿಸುವಲ್ಲಿ ಕೇವಲ ಡೇವಿಡ್ ವಾರ್ನರ್ ಮತ್ತು ಅಕ್ಷರ್ ಪಟೇಲ್ ಮಾತ್ರ ಕೊಡುಗೆ ನೀಡುತ್ತಾ ಬಂದಿದ್ದಾರೆ. ಮಿಕ್ಕಿ ಬ್ಯಾಟರ್ಗಳು ಲಯಕ್ಕೆ ಮರಳುತ್ತಿಲ್ಲ. ಪಂತ್ ಇಲ್ಲದ ತಂಡ ವೀಕ್ ಆಗಿ ಕಂಡು ಬರುತ್ತಿದೆ. ಬೌಲಿಂಗ್ ಉತ್ತಮ ನಿರ್ವಹಣೆ ಕಂಡರೂ ರನ್ ಗಳಿಸಲು ಪರದಾಡುತ್ತಿರುವುದು ತಂಡಕ್ಕೆ ಗೆಲುವು ದೂರವಾಗಿದೆ.
ಪವರ್ - ಪ್ಲೇಯಲ್ಲೇ ವಿಕೆಟ್ ಕಳೆದುಕೊಳ್ಳುತ್ತಿರುವುದರಿಂದ ಡೆಲ್ಲಿಗೆ ಬೃಹತ್ ರನ್ ಕಲೆಹಾಕಲಾಗುತ್ತಿಲ್ಲ. ಆರಂಭಿಕ ಬ್ಯಾಟರ್ ಪೃಥ್ವಿ ಶಾ ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಫಾರ್ಮ್ನಲ್ಲಿದ್ದರು, ಆದರೆ, ಐಪಿಎಲ್ನಲ್ಲಿ ರನ್ಗಳಿಸಲು ಕಷ್ಟಪಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಶಾ ಆರು ಇನ್ನಿಂಗ್ಸ್‌ಗಳಲ್ಲಿ 7.83 ಸರಾಸರಿಯಲ್ಲಿ 47 ರನ್ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮಿಚೆಲ್ ಮಾರ್ಷ್ ನಾಲ್ಕು ಪಂದ್ಯಗಳಲ್ಲಿ ಆರು ರನ್, ರೋವ್‌ಮನ್ ಪೊವೆಲ್ ಮೂರರಲ್ಲಿ ಏಳು, ರೈಲಿ ರೊಸೊವ್ ಮೂರರಲ್ಲಿ 44 ಮತ್ತು ಕಳೆದ ಪಂದ್ಯದಲ್ಲಿ ಬಂದ ಫಿಲ್ ಸಾಲ್ಟ್ ಕೇವಲ ಐದು ರನ್ ಗಳಿಸಿದರು.
ಸನ್ ರೈಸರ್ಸ್ ತಂಡವೂ ಸಹ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದೆ. ಹ್ಯಾರಿ ಬ್ರೂಕ್ ಒಂದು ಪಂದ್ಯದಲ್ಲಿ ಅಬ್ಬರಿಸಿ ಶತಕ ಗಳಿಸಿದರು. ಮತ್ತೆ ಅವರ ಬ್ಯಾಟ್ನಿಂದ ಹೇಳುವಂತಹ ಪ್ರದರ್ಶನ ಕಂಡು ಬರಲಿಲ್ಲ. ನಾಯಕ ಐಡೆನ್ ಮಾರ್ಕ್ರಾಮ್ ಸಹ ರನ್ ಗಳಿಸುತ್ತಿಲ್ಲ. ಇನ್ನು ದೇಶೀಯ ಆಟಗಾರರಾದ ಅಭಿಷೇಕ್ ಶರ್ಮಾ, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ ಮತ್ತು ವಾಷಿಂಗ್ಟನ್ ಸುಂದರ್ ಸಹ ಮಂಕಾಗಿದ್ದಾರೆ.