ಈ ಬಾರಿಯ ಐಪಿಎಲ್ಗೆ ಕೆಲ ನಿಯಮಗಳನ್ನು ಬಿಸಿಸಿಐ ಬದಲಾವಣೆ ತಂದಿದೆ. ಅದರಲ್ಲಿ ಪ್ರಮುಖವಾದದ್ದು ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಕೆಲ ಲೀಗ್ ಕ್ರಿಕೆಟ್ಗಳಲ್ಲಿ ಇದನ್ನ ಬಳಸಲಾಗುತ್ತಿದರೂ, ಮಿಲಿಯನ್ ಡಾಲರ್ ಐಪಿಎಲ್‌ನಲ್ಲಿ ಇದರ ಬಳಕೆ ಮತ್ತು ಪರಿಣಾಮ ಬಗ್ಗೆ ಬಹಳ ಚರ್ಚೆಗಳಾಗಿವೆ. ಎಲ್ಲ ತಂಡಗಳ ಮೊದಲ ಪಂದ್ಯ ಮುಕ್ತಾಯವಾಗಿದೆ. ಐದು ಪಂದ್ಯದಲ್ಲಿ 9 ಜನ ಇಂಪ್ಯಾಕ್ಟ್ ಆಟಗಾರರನ್ನು ಬಳಸಲಾಗಿದೆ.
ಮುಂಬೈ ಎದುರಿನ ಪಂದ್ಯದಲ್ಲಿ ಆರ್ಸಿಬಿ ತಂಡ ಇಂಪ್ಯಾಕ್ಟ ಪ್ಲೇಯರ್ ಬಳಕೆ ಮಾಡಿಕೊಳ್ಳಲಿಲ್ಲ. ಮಿಕ್ಕಂತೆ ಎಲ್ಲ ತಂಡಗಳು ಇಂಪ್ಯಾಕ್ಟ ಪ್ಲೇಯರ್ನ್ನು ಆಡಿಸಿದ್ದಾರೆ. ಆದರೆ ಇದುವರೆಗೆ ಬಂದ ಆಟಗಾರರಿಂದ ಪರಿಣಾಮಕಾರಿ ಬದಲಾವಣೆ ಆಗಿಲ್ಲ. ಮೊದಲ ಪಂದ್ಯದಲ್ಲಿ ಚೆನ್ನೈ ತಂಡ ಅಂಬಟಿ ರಾಯುಡು ಅವರ ಬದಲಿಯಾಗಿ ತುಷಾರ್ ದೇಶ ಪಾಂಡೆ ಅವರನ್ನು ಕಣಕ್ಕಿಳಿಸಿತ್ತು. ಅವರು 3.2 ಓವರ್ನಲ್ಲಿ 51 ಕೊಟ್ಟು ದುಬಾರಿಯಾದರು.
ಬೌಂಡರಿಯಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಕೇನ್ ವಿಲಿಯಮ್ಸನ್ ಗಾಯಕ್ಕೆ ಒಳಗಾದ ಕಾರಣ ಗುಜರಾತ್ ಟೈಟನ್ಸ್ ಸಾಯಿ ಸುದರ್ಶನ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂದರು. ಬ್ಯಾಟಿಂಗ್ನಲ್ಲಿ ಕೊಂಚ ಪರಿಣಾಮ ಬೀರಿದರಾದರೂ ಪಂದ್ಯದ ತಿರುವಿಗೆ ಕಾರಣರಾಗಲಿಲ್ಲ. ಆದರೆ ಐಪಿಎಲ್‌ನಲ್ಲಿ ಪರಿಚಯಿಸಿದ ಈ ಹೊಸ ನಿಯಮದ ಬಗ್ಗೆ ಕೆಲ ಹಿರಿಯ ಆಟಗಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಈ ನಿಯಮಕ್ಕೆ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.