ನವದೆಹಲಿ :ಶ್ರೀಲಂಕಾದ ಆಲ್ರೌಂಡರ್ ವನಿಂದು ಹಸರಂಗ ಸೇರಿದಂತೆ ಮೂವರು ಆಟಗಾರರು ಬದಲಿ ಆಟಗಾರರಾಗಿ 14ನೇ ಆವೃತ್ತಿಯ 2ನೇ ಹಂತದ ಐಪಿಎಲ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪುನಾರಂಭಗೊಳ್ಳಲಿದೆ. ಕೆಲವು ಆಟಗಾರರು ಈ ಟೂರ್ನಿಗೆ ಅಲಭ್ಯರಾಗುತ್ತಿರುವುದರಿಂದ ಆರ್ಸಿಬಿ ಇಂದು ಬದಲಿ ಆಟಗಾರರನ್ನು ಘೋಷಿಸಿದೆ.
ಇದರಲ್ಲಿ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಬದಲಿಗೆ ಶ್ರೀಲಂಕಾದ ಸ್ಪಿನ್ ಆಲ್ರೌಂಡರ್ ವನಿಂದು ಹಸರಂಗ, ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಕಿವೀಸ್ನ ಫಿನ್ ಅಲೆನ್ ಬದಲಿಗೆ ಸಿಂಗಾಪುರ್ ತಂಡದ ಟಿಮ್ ಡೇವಿಡ್ ಮತ್ತು ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ಬದಲಿಗೆ ಶ್ರೀಲಂಕಾದ ದುಷ್ಮಂತ ಚಮೀರರನ್ನು ಆರ್ಸಿಬಿ ಬದಲಿ ಆಟಗಾರರನ್ನಾಗಿ ನೇಮಿಸಿದೆ.
ಶಿಖರ್ ಧವನ್ ನೇತೃತ್ವದಲ್ಲಿ ಭಾರತ ತಂಡದ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಶ್ರೀಲಂಕಾ 2-1ರಿಂದ ಸರಣಿ ಗೆಲ್ಲುವಲ್ಲಿ ಹಸರಂಗ ಪ್ರಮುಖ ಪಾತ್ರವಹಿಸಿದ್ದರು. ಈ ಸರಣಿಯಲ್ಲಿ ಹಸರಂಗ 7 ವಿಕೆಟ್ ಪಡೆದಿದ್ದರು. ಇದರ ಜೊತೆಗೆ ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿರುವುದರಿಂದ ಆರ್ಸಿಬಿ ಲಂಕಾ ಆಟಗಾರನಿಗೆ ಗಾಳ ಹಾಕಿದೆ.
ಇನ್ನು, ಫಿನ್ ಅಲೆನ್ ಪಾಕಿಸ್ತಾನ ಪ್ರವಾಸಕ್ಕೆ ತೆರಳುವುದರಿಂದ 2ನೇ ಹಂತದ ಐಪಿಎಲ್ಗೆ ಅಲಭ್ಯರಾಗಲಿದ್ದಾರೆ. ಅವರ ಬದಲಿಗೆ ಆಸ್ಟ್ರೇಲಿಯಾ ಮೂಲದ ಸಿಂಗಾಪುರ್ ಕ್ರಿಕೆಟಿಗ ಟಿಮ್ ಡೇವಿಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇವರು ವಿಶ್ವದ ಹಲವಾರು ಟಿ20 ಲೀಗ್ನಲ್ಲಿ ತಮ್ಮ ಅಮೋಘ ಪ್ರದರ್ಶನ ತೋರಿದ್ದಾರೆ. ಇತ್ತೀಚೆಗೆ ಮುಗಿದ ರಾಯಲ್ ಲಂಡನ್ ಏಕದಿನ ಟ್ರೋಫಿಯಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದರು.
ಇದನ್ನು ಓದಿ:ಪಂಜಾಬ್ ಕಿಂಗ್ಸ್ ಸೇರಿದ ನೇಥನ್ ಎಲ್ಲಿಸ್.. ಚೊಚ್ಚಲ T20ನಲ್ಲೇ ಹ್ಯಾಟ್ರಿಕ್ ಪಡೆದಿದ್ದ ಆಸೀಸ್ ಬೌಲರ್..