ಮಗ ತನ್ನ ಕಣ್ಣೆದುರಿಗೆ ಸಾಧನೆ ಮಾಡುತ್ತಿದ್ದರೆ ಎಂಥ ತಂದೆಗೂ ಅದು ಹೆಮ್ಮೆಯೇ. ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ನಿನ್ನೆ ಐಪಿಎಲ್ಗೆ ಅಧಿಕೃತವಾಗಿ ಪದಾರ್ಪಣೆ ಮಾಡಿದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಮರಿ ತೆಂಡೂಲ್ಕರ್ ಕ್ರಿಕೆಟ್ನಲ್ಲಿ ಭವಿಷ್ಯದ ಹುಡುಕಾಟಕ್ಕೆ ನಾಂದಿ ಹಾಡಿದರು.
ಪುತ್ರನ ಐಪಿಎಲ್ ಎಂಟ್ರಿಯಿಂದ ಪುಳಕಿತರಾಗಿರುವ ಸಚಿನ್ ಭಾವನಾತ್ಮಕ ಸಂದೇಶದ ಜೊತೆಗೆ ತಮ್ಮೊಂದಿಗೆ ಪುತ್ರನಿರುವ ಚಿತ್ರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. "ಅರ್ಜುನ್, ಇಂದು ನೀವು ಕ್ರಿಕೆಟ್ ಪ್ರಯಾಣದಲ್ಲಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದ್ದೀರಿ. ನಿನ್ನನ್ನು ಪ್ರೀತಿಸುವ ಮತ್ತು ಕ್ರೀಡೆಯ ಬಗ್ಗೆ ಒಲವು ಹೊಂದಿರುವ ನಿನ್ನ ತಂದೆಯಾಗಿ, ನೀವು ಕ್ರೀಡೆಗೆ ಅರ್ಹವಾದ ಗೌರವ ಕೊಡುತ್ತೀರಿ ಎಂದು ಭಾವಿಸಿದ್ದೇನೆ. ಕ್ರೀಡೆಯನ್ನು ಪ್ರೀತಿಸಿ ಅದು ನಿಮ್ಮನ್ನು ಮರಳಿ ಪ್ರೀತಿಸುತ್ತದೆ.
ನೀವು ಇಲ್ಲಿಗೆ ತಲುಪಲು ತುಂಬಾ ಕಷ್ಟಪಟ್ಟಿದ್ದೀರಿ ಎಂದು ನನಗೆ ಗೊತ್ತಿದೆ. ಕ್ರಿಕೆಟ್ನಲ್ಲಿ ನೀವು ಮುಂದುವರಿಸುತ್ತೀರಿ ಎಂಬ ಖಾತ್ರಿ ನನಗಿದೆ. ಇದೊಂದು ಸುಂದರ ಪ್ರಯಾಣದ ಆರಂಭ. ಒಳ್ಳೆಯದಾಗಲಿ" ಎಂದು ಹರಸಿದ್ದಾರೆ. ಇದು ಅಭಿಮಾನಿಗಳ ಗಮನ ಸೆಳೆದಿದೆ.
23 ವರ್ಷದ ಅರ್ಜುನ್ ತೆಂಡೂಲ್ಕರ್ ಕಳೆದ ಕೆಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ. ಅವರು 2021 ರಲ್ಲಿ ತಂಡಕ್ಕೆ ಹರಾಜಿನಲ್ಲಿ ಆಯ್ಕೆಯಾದರು. ಆದರೆ, ಗಾಯದಿಂದಾಗಿ ಆ ಸೀಸನ್ನಿಂದ ಹಿಂದೆ ಸರಿಯಬೇಕಾಯಿತು. 2022 ರ ಹರಾಜಿನಲ್ಲಿ ಮರಳಿ ಮುಂಬೈಗೆ ಆಯ್ಕೆಯಾದರು. ತಂಡ ಕಠಿಣ ಸವಾಲು ಎದುರಿಸಿದ ಕಾರಣ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಡಗೌಟ್ನಲ್ಲಿ ತಂಡ ಮತ್ತು ಮಾರ್ಗದರ್ಶಕರಾದ ಸಚಿನ್ ಜೊತೆಗೆ ಕಾಣಿಸಿಕೊಂಡಿದ್ದರು.