ಮುಂಬೈ :ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸೈಮನ್ ಕ್ಯಾಟಿಚ್ ಐಪಿಎಲ್ ಪುನಾರಂಭಕ್ಕೆ ಕೆಲವೇ ದಿನಗಳಿರುವಾಗ ತಮ್ಮ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರ ಬದಲಿಗೆ ಕ್ರಿಕೆಟ್ ಕಾರ್ಯಾಚಾರಣೆಗಳ ನಿರ್ದೇಶಕರಾಗಿದ್ದ ಮೈಕ್ ಹೆಸನ್ರನ್ನೇ ತಂಡದ ಮುಖ್ಯ ಕೋಚ್ ಆಗಿ ಆರ್ಸಿಬಿ ಘೋಷಿಸಿದೆ.
ಸೆಪ್ಟೆಂಬರ್ 19ರಿಂದ ಐಪಿಎಲ್ ದ್ವಿತೀಯಾರ್ಧ ಆರಂಭಗೊಳ್ಳಲಿದೆ. ಆದರೆ, ವೈಯಕ್ತಿಕ ಕಾರಣ ನೀಡಿ ಸೈಮನ್ ಕ್ಯಾಟಿಚ್ ಆರ್ಸಿಬಿ ಹೆಡ್ ಕೋಚ್ ಸ್ಥಾನ ತೊರೆದಿದ್ದಾರೆ. ಹಾಗಾಗಿ, ಮೈಕ್ ಹೆಸನ್ 2021ರ ಐಪಿಎಲ್ನಲ್ಲಿ ಆರ್ಸಿಬಿ ನಿರ್ದೇಶಕನ ಜವಾಬ್ದಾರಿ ಜೊತೆಗೆ ಮುಖ್ಯ ಕೋಚ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಆರ್ಸಿಬಿ ಹೇಳಿಕೆ ಬಿಡುಗಡೆ ಮಾಡಿದೆ.
ಕಳೆದ ಐಪಿಎಲ್ನಲ್ಲಿ ಕ್ಯಾಟಿಚ್ ಐಪಿಎಲ್ ಫ್ರಾಂಚೈಸಿಯ ಕೋಚ್ ಸ್ಥಾನಕ್ಕೇರಿದ್ದರು. ತಮ್ಮ ಮೊದಲನೇ ಆವೃತ್ತಿಯಲ್ಲೇ ಆರ್ಸಿಬಿ ಪ್ಲೇ ಆಫ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. 2016ರಲ್ಲಿ ಕೊನೆಯ ಬಾರಿ ಪ್ಲೇ ಆಫ್ ತಲುಪಿತ್ತು.