ಅಹಮದಾಬಾದ್ (ಗುಜರಾತ್):ಅದ್ಭುತ್ ಫಾರ್ಮ್ನಲ್ಲಿರುವ ಭಾರತದ ಯುವ ಬ್ಯಾಟರ್ ಶುಭಮನ್ ಗಿಲ್ ತಮ್ಮ ಐಪಿಎಲ್ ವೃತ್ತಿ ಜೀವನದ 2000 ರನ್ ಗಡಿ ದಾಟಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರ ಎಂಬ ಖ್ಯಾತಿಗೂ ಅವರು ಪಾತ್ರರಾದರು. ಇಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗಿಲ್ ವಿಶೇಷ ದಾಖಲೆ ಬರೆದಿದ್ದಾರೆ.
23ನೇ ವಯಸ್ಸಿಗೇ ಗಿಲ್ ಐಪಿಎಲ್ನಲ್ಲಿ 2000 ರನ್ ಗಡಿ ತಲುಪಿದ್ದಾರೆ. ಇದರೊಂದಿಗೆ ಐಪಿಎಲ್ನ ಅತ್ಯಂತ ಯಶಸ್ವಿ ಯುವ ಬ್ಯಾಟರ್ ಆಗಿ ಹೊರಹೊಮ್ಮಿದರು. ಪಾಕಿಸ್ತಾನ ಮಾಜಿ ಆಟಗಾರ ರಮೀಜ್ ರಾಜಾ ಅಂತಾರಾಷ್ಟ್ರಿಯ ಕ್ರಿಕೆಟ್ನಲ್ಲಿ ಗಿಲ್ ಅವರ ಆಟದ ಸೊಬಗು ಕಂಡು "ಜೂನಿಯರ್ ರೋಹಿತ್ ಶರ್ಮಾ" ಎಂದು ಮೆಚ್ಚಿಕೊಂಡಿದ್ದರು. ಇಂದಿನ ಪಂದ್ಯದಲ್ಲಿ 23 ರನ್ ಗಳಿಸುತ್ತಿದ್ದಂತೆ ಗಿಲ್ ಈ ದಾಖಲೆ ಮಾಡಿದ್ದಾರೆ. ಜಿಟಿ(GT) ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ಇವರು 39 ರನ್ ಕಲೆ ಹಾಕಿ ಆಡುತ್ತಿದ್ದಾಗ ಕೆಕೆಆರ್ ವಿರುದ್ಧ ವಿಕೆಟ್ ಒಪ್ಪಿಸಿದರು.
2,000 ರನ್ ತಲುಪಿದ 2ನೇ ಕಿರಿಯ ಕ್ರಿಕೆಟಿಗ:ದ್ವಿ ಸಹಸ್ರ ರನ್ ಮೊತ್ತವನ್ನು ಐಪಿಎಲ್ನಲ್ಲಿ ಗಿಲ್ ಅವರಿಗಿಂತ ಕಡಿಮೆ ವಯಸ್ಸಿನಲ್ಲಿ ರಿಷಭ್ ಪಂತ್ ಸಾಧಿಸಿದ್ದರು. ಪಂತ್ ತಮ್ಮ 23 ವರ್ಷ 27 ದಿನಗಳಲ್ಲಿ ಈ ಸಾಧನೆ ಮಾಡಿದರೆ, ಗಿಲ್ 23 ವರ್ಷ 214 ದಿನದಲ್ಲಿ ಎರಡು ಸಾವಿರ ರನ್ ಪೂರೈಸಿದರು. ರಿಷಭ್ ಪಂತ್ 187 ದಿನ ಮೊದಲು ದಾಖಲೆ ಮಾಡಿದ್ದು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.