ನವದೆಹಲಿ:ಪೃಥ್ವಿ ಶಾ ಭಾರತದ ಇತರ ಯುವ ಬ್ಯಾಟರ್ಗಳಿಗೇನೂ ಕಮ್ಮಿ ಇಲ್ಲ. ಅವರಿಗೆ ಇನ್ನಷ್ಟು ಅವಕಾಶ ಕೊಡುವ ಅಗತ್ಯವಿದೆ ಎಂದು ಆಸ್ಟ್ರೇಲಿಯಾದ ಲೆಜೆಂಡರಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಹೇಳಿದರು. ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪೃಥ್ವಿ ಶಾ, ಐಪಿಎಲ್‌ನಲ್ಲಿ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ಆದರೆ ಅವರಲ್ಲಿ ಕೌಶಲ್ಯವಿದೆ ಎಂದು ವ್ಯಾಟ್ಸನ್ ಹೇಳುತ್ತಾರೆ.
ನಿನ್ನೆ (ಶನಿವಾರ) ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಪೃಥ್ವಿ ಶಾ ಅವರನ್ನು ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟಿಂಗ್‌ಗೆ ಇಳಿಸಲಾಗಿತ್ತು. ಡಿಸಿ ಮೊದಲು ಬೌಲಿಂಗ್ ಮಾಡಿದಾಗ ಶಾ ಮೈದಾನದಿಂದ ಹೊರಗಿದ್ದರು. ಬ್ಯಾಟಿಂಗ್‌ಗೆ ಬಂದಾಗ ಡಕ್ಗೆ ರನೌಟ್ಗೆ ಪೆವಿಲಿಯನ್ ಸೇರಿದ್ದರು.
ಪೃಥ್ವಿ ಶಾ ಐಪಿಎಲ್‌ನ ಈವರೆಗೆ ಐದು ಇನ್ನಿಂಗ್ಸ್ ಆಡಿದ್ದು ಕೇವಲ 34 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಬಾರಿ ಎರಡಂಕಿಯ ರನ್ ಗಳಿಸಿದ್ದಾರೆ. ಜುಲೈ 25, 2021 ರಂದು ಶ್ರೀಲಂಕಾ ವಿರುದ್ಧದ ಟಿ20 ಯಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ ಪ್ರತಿನಿಧಿಸಿದ್ದರು. ಆರಂಭಿಕ ಸ್ಥಾನಕ್ಕೆ ಪೈಪೋಟಿ ಹೆಚ್ಚು ಇರುವುದರಿಂದ ಬ್ಯಾಟಿಂಗ್ ವೈಫಲ್ಯ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಲು ತೊಡಕಾಗುವ ಸಾಧ್ಯತೆ ಇದೆ ಎಂದು ವಿಮರ್ಶಿಸಲಾಗುತ್ತದೆ.