ಅಹಮದಾಬಾದ್:ಗುಜರಾತ್ ಜೈಂಟ್ಸ್ ವಿರುದ್ಧ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ನಾಯಕ ಸಂಜುಗೆ, ಟೀಂ ಇಂಡಿಯಾದಲ್ಲಿ ಸ್ಥಿರವಾದ ಅವಕಾಶ ಸಿಗಬೇಕು ಎಂದು ಹೇಳಿದ್ದಾರೆ.
178 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ 12 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತ್ತು. ಸ್ಯಾಮ್ಸನ್ ಅವರು ರಶೀದ್ ಖಾನ್ ಓವರ್‌ನಲ್ಲಿ 20 ರನ್ ಗಳಿಸಿದ್ದು, ಪಂದ್ಯಕ್ಕೆ ತಿರುವು ನೀಡಿತ್ತು. ಸಂಜು ಸ್ಯಾಮ್ಸನ್ 32 ಬಾಲ್ನಲ್ಲಿ 60 ರನ್ ಗಳಿಸಿ ಔಟಾದರು. ಶಿಮ್ರಾನ್ ಹೆಟ್ಮೆಯರ್ ಕೇವಲ 26 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿ ಅಸಾಧ್ಯವಾದುದನ್ನೂ ಸಾಧ್ಯವಾಗಿಸಿದರು. ಸ್ಯಾಮ್ಸನ್ ಮತ್ತು ಹೆಟ್ಮೆಯರ್ 27 ಎಸೆತಗಳಲ್ಲಿ 59 ರನ್‌ಗಳ ನಿರ್ಣಾಯಕ ಜೊತೆಯಾಟ ನೀಡಿದರು. ಧ್ರುವ್ ಜುರೆಲ್ ಅವರೊಂದಿಗೆ 20 ಎಸೆತಗಳಲ್ಲಿ 47 ರನ್‌ಗಳನ್ನು ಸೇರಿಸಿದರು.
"ನಾಯಕನ ಅಮೋಘ ಆಟ. ಸಂಜು ಅವರಂಥ ಆಟಗಾರರು ಇತರ ಆಟಗಾರರಿಗಿಂತ ಹೆಚ್ಚು ಧೈರ್ಯ ಹೊಂದಿದ್ದಾರೆ. ಅವರೊಬ್ಬ ವಿಶೇಷ ಆಟಗಾರ. ಸಂಜು ಸ್ಯಾಮ್ಸನ್ ಅವರು ಹೆಟ್ಮೆಯರ್‌ಗಿಂತ ಹೆಚ್ಚಿನ ಪ್ರಭಾವವನ್ನು ತಂಡದ ಮೇಲೆ ಬೀರಿದರು. ಏಕೆಂದರೆ ಗೆಲುವಿನ ಮುನ್ಸೂಚನೆಯನ್ನು ಅವರ ಆಟ ನೀಡಿತ್ತು. ಶಿಮ್ರಾನ್ ಹೆಟ್ಮೆಯರ್ ಅದನ್ನು ಪೂರ್ಣಗೊಳಿಸಿದರು" ಎಂದು ಹರ್ಭಜನ್ ಪಂದ್ಯದ ನಂತರದ ಶೋನಲ್ಲಿ ಹೇಳಿದರು.