ಜೈಪುರ (ರಾಜಸ್ಥಾನ):ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 32 ರನ್‌ಗಳ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಅವರ ಶ್ರಮಕ್ಕೆ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಶ್ಲಾಘಿಸಿದ್ದಾರೆ. ಹಾಗೇ ಯುವ ಆಟಗಾರರ ಈ ರೀತಿಯ ಪ್ರದರ್ಶನಕ್ಕೆ ಕಾರಣೀಭೂತರಾದ ಸಹಾಯಕ ಸಿಬ್ಬಂದಿಗೂ ನಾಯಕ ಮೆಚ್ಚುಗೆ ನುಡಿಗಳನ್ನು ಆಡಿದ್ದಾರೆ.
ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 202 ರನ್ ಗುರಿ ಮುಟ್ಟುವಲ್ಲಿ ಜೈಸ್ವಾಲ್ ಐಪಿಎಲ್‌ನಲ್ಲಿ 43 ಎಸೆತಗಳಲ್ಲಿ 77 ರನ್ ಮತ್ತು ಜುರೆಲ್ 15 ಎಸೆತಗಳಲ್ಲಿ 34 ರನ್ ಗಳಿಸಿದ್ದು ಕಾರಣವಾಗಿತ್ತು. ನಂತರ ರಾಜಸ್ಥಾನ ತಂಡ ಚೆನ್ನೈ ತಂಡವನ್ನು 6 ವಿಕೆಟ್‌ಗೆ 170ಕ್ಕೆ ಕಟ್ಟಿಹಾಕಿತು. ಆಡಮ್ ಝಂಪಾ 22ಕ್ಕೆ 3 ಮತ್ತು ರವಿಚಂದ್ರನ್ ಅಶ್ವಿನ್ 35ಕ್ಕೆ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ರಾಜಸ್ಥಾನ 10 ಅಂಕದಿಂದ ಪಾಂಯಿಂಟ್ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಕೆಳಕ್ಕೆ ತಳ್ಳಿ ಅಗ್ರ ಸ್ಥಾನಕ್ಕೇರಿತು. ಚೆನ್ನೈ ಸೂಪರ್ ಕಿಂಗ್ಸ್ ರನ್ರೇಟ್ ಕುಸಿತದಿಂದ 3ನೇ ಸ್ಥಾನಕ್ಕೆ ಇಳಿಕೆ ಕಂಡಿತು.
ಯುವ ಆಟಗಾರರಾದ ಜೈಸ್ವಾಲ್, ಜುರೆಲ್ ಮತ್ತು ಪಡಿಕಲ್ ಅವರ ಬ್ಯಾಟಿಂಗ್ ಅದ್ಭುತವಾಗಿದೆ ಎಂದು ಪಂದ್ಯದ ನಂತರ ಸ್ಯಾಮ್ಸನ್ ಹೇಳಿದರು. ಯುವಕರ ಮನಸ್ಸಿನಲ್ಲಿ ಆಕ್ರಮಣ ಮತ್ತು ದಾಳಿಯ ಮನೋಭಾವವನ್ನು ಉತ್ತೇಜಿಸುವುದನ್ನು ಮುಂದುವರಿಸುವುದಾಗಿ ಹೇಳಿದರು.
ಟಾಸ್ ಗೆದ್ದಾಗ ಪಿಚ್ ಬ್ಯಾಟಿಂಗ್ಗೆ ಸಹಕಾರಿಯಾಗುತ್ತದೆ ಎಂದು ಭಾವಿಸಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದೆ. ಈ ನಿರ್ಧಾರಕ್ಕೆ ತಕ್ಕಂತೆ, ಜೈಸ್ವಾಲ್, ಜುರೆಲ್ ಮತ್ತು ಪಡಿಕಲ್ ತಂಡಕ್ಕೆ ಹೆಚ್ಚು ಸಹಕಾರಿಯಾಗಿ ನಿಂತು ರನ್ ಗಳಿಸಿಕೊಟ್ಟರು. ಇವರ ರನ್ ಸಹಾಯದಿಂದ 200 ರನ್ ಗಡಿದಾಟಿದೆವು ಎಂದು ಸಂಜು ಮೂವರ ಬ್ಯಾಟಿಂಗ್ ಬಗ್ಗೆ ಮೆಚ್ಚಿಕೊಂಡಿದ್ದಾರೆ.
"ನಮಗೆ ಈ ಗೆಲುವು ತುಂಬಾ ಅಗತ್ಯವಾಗಿತ್ತು. ಪರಿಸ್ಥಿತಿಯನ್ನು ನೋಡುವಾಗ, ಇಂದು ನಾವು ಬ್ಯಾಟಿಂಗ್ ಮಾಡಬೇಕು ಎಂದು ಭಾವಿಸಿದೆವು. ನಮ್ಮ ಎಲ್ಲಾ ಯುವ ಬ್ಯಾಟ್ಸ್‌ಮನ್‌ಗಳು ನಿರ್ಭೀತವಾಗಿ ಬ್ಯಾಟ್ ಮಾಡಿದರು. ಈ ಗೆಲುವಿನ ಹೆಚ್ಚಿನ ಶ್ರೇಯವು ತಂಡದ ನಿರ್ವಹಣೆ ಮತ್ತು ಪೋಷಕ ಸಿಬ್ಬಂದಿಗೆ ಸಲ್ಲುತ್ತದೆ. ಹೌದು. ಅವರು ಯುವ ಆಟಗಾರರಿಗಾಗಿ ಹೆಚ್ಚು ಶ್ರಮಿಸಿದ್ದಾರೆ. ಪೋಷಕ ಸಿಬ್ಬಂದಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಯುವಕರ ಮನಸ್ಸಿನಲ್ಲಿ ಆಕ್ರಮಣ ಮತ್ತು ದಾಳಿ ಮನೋಭಾವವನ್ನು ಬಿತ್ತುತ್ತಾರೆ ಇದು ಗೆಲುವಿನ ಕೀ ಅಂಶ" ಎಂದಿದ್ದಾರೆ.
2020ರ ನಂತರ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ 7 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್ಆರ್ 6 ಬಾರಿ ಗೆದ್ದಿದ್ದು ಚೆನ್ನೈ ಕೇವಲ ಒಂದು ಗೆಲುವನ್ನು ದಾಖಲಿಸಿದೆ. ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ತಂಡ ಆಡಲಿದೆ. ಈ ಹಿನ್ನೆಲೆಯಲ್ಲಿ ತಂಡ ಮುಂಬೈಗೆ ಪ್ರಯಾಣ ಬೆಳೆಸಿದೆ.
ಇದನ್ನೂ ಓದಿ:ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್: ಪಿವಿ ಸಿಂಧು, ಪ್ರಣಯ್ ಕ್ವಾರ್ಟರ್ಫೈನಲ್ಗೆ