ಚೆನ್ನೈ:ಈ ಬಾರಿಯ ಐಪಿಎಲ್ನಲ್ಲಿ ಕೆಲ ಪಂದ್ಯಗಳು ಕೊನೆಯ ಎಸೆತದವರೆಗೂ ಫಲಿತಾಂಶ ಹಿಡಿದಿಟ್ಟಿವೆ. ಕಳೆದ 5 ಪಂದ್ಯಗಳ ಪೈಕಿ 4 ಮ್ಯಾಚ್ಗಳು ಕೊನೆಯ ಓವರ್‌ವರೆಗೂ ರೋಚಕವಾಗಿ ಸಾಗಿದ್ದು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಕೊನೆಯ ಎಸೆತದಲ್ಲಿ ರಿಸಲ್ಟ್ ನೀಡಿದ್ದು, ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿವೆ.
ನಿನ್ನೆ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಕೂಡ ಇಂತಹುದ್ದೇ ಕುತೂಹಲ ಸೃಷ್ಟಿಸಿತ್ತು. ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಅಬ್ಬರದ ನಡುವೆಯೂ ರಾಯಲ್ಸ್ ತಂಡದ ವೇಗಿ ಸಂದೀಪ್ ಶರ್ಮಾ ಕಮಾಲ್ ಬೌಲಿಂಗ್ ಮಾಡಿ ತಂಡದ ಗೆಲುವಿಗೆ ಕಾರಣರಾದರು. ಶರ್ಮಾರ ಬೌಲಿಂಗ್ ಕರಾಮತ್ತಿನ ಹಿಂದೆ ಕೋಚ್ ಲಸಿತ್ ಮಾಲಿಂಗ್ ಇದ್ದರು ಎಂಬುದು ಯಾರಿಗೂ ತಿಳಿದಿಲ್ಲ.
ಹೌದು, ಡಗೌಟ್ನಲ್ಲಿ ಕುಳಿತಿದ್ದ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಕೊನೆಯಲ್ಲಿ ನೀಡಿದ ಸಲಹೆ ವರ್ಕೌಟ್ ಆಗಿದೆ. ಮೈದಾನದಲ್ಲಿದ್ದ ದೈತ್ಯ ಬ್ಯಾಟರ್ಗಳಾದ ಜಡೇಜಾ ಮತ್ತು ಧೋನಿಗೆ ಹೇಗೆ ಬೌಲ್ ಮಾಡಬೇಕು ಎಂಬುದನ್ನು ಮಾಲಿಂಗ ಅರಿತು ತಕ್ಷಣವೇ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರನ್ನು ಕರೆದು "ಹೀಗೆ" ಬೌಲ್ ಮಾಡಲು ಸಲಹೆ ನೀಡಿದ್ದಾರೆ. ಅದನ್ನು ಚಹಲ್ ಶರ್ಮಾಗೆ ತಂದು ಮುಟ್ಟಿಸಿದರು. ಅದರಂತೆಯೇ ಬೌಲ್ ಮಾಡಿದ ಶರ್ಮಾ ಗೆಲುವಿನ ಹೀರೋ ಆದರು.
ಲಸಿತ್ ಮಾಲಿಂಗ್ ಹೇಳಿದ್ದೇನು?:ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಯಾರ್ಕರ್ ಸ್ಪೆಷಲಿಸ್ಟ್. ತಮ್ಮ ಕರಾರುವಾಕ್ ಯಾರ್ಕರ್ಗಳಿಂದಲೇ ಅದೆಷ್ಟೋ ವಿಕೆಟ್ಗಳನ್ನು ತರಗೆಲೆಯಂತೆ ಉದುರಿಸಿದ್ದಾರೆ. ಯಾರ್ಕರ್ ಮೂಲಕ ಮಾತ್ರ ಜಡೇಜಾ- ಧೋನಿಯನ್ನು ಕಟ್ಟಿ ಹಾಕಲು ಸಾಧ್ಯ ಎಂದರಿತ ಮಾಲಿಂಗ ಇದೇ ತಂತ್ರವನ್ನು ಬಳಸಲು ಶರ್ಮಾಗೆ ಹೇಳಿದ್ದರು. ಇದಕ್ಕೆ ಕಾರಣ ಲೈನ್ ಅಂಡ್ ಲೆಂಥ್ ಬೌಲಿಂಗ್ ಮಾಡುತ್ತಿದ್ದರೂ ಮೊದಲ ಮೂರು ಎಸೆತಗಳಲ್ಲಿ ಧೋನಿ 2 ಭರ್ಜರಿ ಸಿಕ್ಸರ್ ಬಾರಿಸಿದ್ದರು.
ದೈತ್ಯ ಫಿನಿಷರ್ ಅನ್ನು ಕಟ್ಟಿಹಾಕಲು ಮಾಲಿಂಗ ಹಾಕಿದ ಚಕ್ರವ್ಯೂಹವೇ "ಯಾರ್ಕರ್". ಕೋಚ್ ನೀಡಿದ ಸಲಹೆಯನ್ನು ಚಾಚುತಪ್ಪದೇ ಮಾಡಿದ ಶರ್ಮಾ ಮುಂದಿನ ಮೂರು ಎಸೆತಗಳನ್ನು ಯಾರ್ಕರ್ ರೂಪದಲ್ಲಿ ಹಾಕಿ ರನ್ ಗಳಿಸಿದಂತೆ ನೋಡಿಕೊಂಡರು. ಕೊನೆಯ ಮೂರು ಎಸೆತದಲ್ಲಿ ಮೂರು ರನ್ಗಳು ಮಾತ್ರ ಬಂದವು. ಮೊದಲ 3 ಎಸೆತಗಳಲ್ಲಿ 14 ರನ್ ನೀಡಿದ್ದ ಸಂದೀಪ್ ಶರ್ಮಾ ಕೊನೆಯ 3 ಎಸೆತಗಳಲ್ಲಿ ಕೇವಲ 3 ರನ್ ನೀಡಿದ ಕಾರಣ ರಾಜಸ್ಥಾನ್ ರಾಯಲ್ಸ್ 3 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಜಡೇಜಾ ಮತ್ತು ಧೋನಿ ಗೆಲುವಿಗಾಗಿ ದಿಟ್ಟ ಹೋರಾಟ ನಡೆಸಿದರು. ಕೊನೆಯ 18 ಎಸೆತಗಳಲ್ಲಿ 54 ರನ್ ಬೇಕಿದ್ದಾಗ ಆಟಗಾರರು ಅಬ್ಬರಿಸಿದರು. ಜಡೇಜಾ 15 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ 1 ಬೌಂಡರಿಯಿಂದ 25 ರನ್ ಮಾಡಿದರೆ, ಇನ್ನೊಂದೆಡೆ ಗ್ರೇಟ್ ಫಿನಿಷಿಂಗ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿಗಳಿಂದ 32 ರನ್ ಚಚ್ಚಿದರು. ಆದರೆ, ಗೆಲುವಿನ ಅದೃಷ್ಟ ಮಾತ್ರ ರಾಜಸ್ಥಾನ ಪರವಾಗಿತ್ತು.
ಓದಿ:ಚೆನ್ನೈ ಗೆಲುವು ತಡೆದ ಸಂದೀಪ್ ಶರ್ಮಾ ಯಾರ್ಕರ್: ರಾಜಸ್ಥಾನ ರಾಯಲ್ಸ್ಗೆ 3 ರನ್ ಜಯ