ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಶ್ರೀಕಾರ್ ಭರತ್ 6 ಸಿಡಿಸಿ ಆರ್ಸಿಬಿಗೆ ರೋಚಕ ಗೆಲುವು ತಂದಿತ್ತರು. ಜಯದ ನಿರೀಕ್ಷೆಯಲ್ಲಿದ್ದ ಪಂತ್ ಪಡೆ ನಿರಾಸೆ ಅನುಭವಿಸಿತು.
14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರಿಷಬ್ ಪಂತ್ ಪಡೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 164ರನ್ಗಳಿಕೆ ಮಾಡಿತು.
ಈ ಗುರಿ ಬೆನ್ನತ್ತಿದ ಕೊಹ್ಲಿ ಪಡೆ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಪಡಿಕಲ್ (0) ಮತ್ತು ವಿರಾಟ್ ಕೊಹ್ಲಿ (4) ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಶ್ರಿಕಾರ್ ಭರತ್ ಮತ್ತು ಎಬಿ ಡಿ ವಿಲಿಯರ್ಸ್ ಜೋಡಿ 55 ರನ್ಗಳ ಉತ್ತಮ ಜೊತೆಯಾಟ ತಂಡಕ್ಕೆ ಬುನಾದಿಯಾಯಿತು.
ಉತ್ತಮವಾಗಿ ಆಡುತ್ತಿದ್ದ ಎಬಿಡಿ (26) ಅಕ್ಷರ್ ಪಟೇಲ್ ಎಸೆತದಲ್ಲಿ ಔಟಾದರು. ನಂತರ ಗ್ಲೇನ್ ಮ್ಯಾಕ್ಸವೆಲ್ ಮತ್ತು ಭರತ್ ಜೋಡಿ ಡೆಲ್ಲಿಗೆ ಸೋಲುಣಿಸಿತು. ಶ್ರೀಕಾರ್ ಭರತ್ 52 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿ ಮೂಲಕ ಅಜೇಯ 78 ರನ್ ಗಳಿಸಿದ್ರೆ, ಮ್ಯಾಕ್ಸವೆಲ್ 33 ಎಸೆತದಲ್ಲಿ 8 ಬೌಂಡರಿ ಮೂಲಕ 51 ಪೇರಿಸಿದರು. ಕೊನೆಯ ಎಸೆತದಲ್ಲಿ ಆರ್ಸಿಬಿಗೆ 5 ರನ್ ಬೇಕಿತ್ತು. ಆಗ ಶ್ರೀಕಾರ್ ಭರತ್ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದರು.
ಡೆಲ್ಲಿ ಪಡೆ ಅನ್ರಿಚ್ ನಾರ್ತೆಜ್ 2 ಹಾಗೂ ಅಕ್ಷರ್ ಪಟೇಲ್ 1 ವಿಕೆಟ್ ಕಬಳಿಸಿದರು.
ಇನ್ನು ಡೆಲ್ಲಿ ಪಡೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಮೊದಲ 10 ಓವರ್ಗಳಲ್ಲಿ ಈ ಜೋಡಿ 88ರನ್ಗಳಿಕೆ ಮಾಡಿತು. ಪೃಥ್ವಿ ಶಾ 48ರನ್, ಶಿಖರ್ ಧವನ್ 43 ರನ್ಗಳಿಕೆ ಮಾಡಿದರು.