ನವಿ ಮುಂಬೈ:ವನಿದು ಹಸರಂಗ ಎಂಬ ಸ್ಪಿನ್ ಮಾಂತ್ರಿಕನ ಬಲೆಗೆ ಬಿದ್ದ ಸನ್ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಂಡಿಯೂರಿದೆ. ಆರ್ಸಿಬಿ ನೀಡಿದ 192 ರನ್ಗಳ ಬೃಹತ್ ಮೊತ್ತ ಬೆನ್ನಟ್ಟುವಲ್ಲಿ ವಿಫಲವಾದ ಸನ್ರೈಸರ್ಸ್ 20 ಓವರ್ಗಳಲ್ಲಿ 125 ರನ್ ಗಳಿಸಿ ಆಲೌಟ್ ಆಯಿತು. 67 ರನ್ಗಳ ಗೆಲುವು ಸಾಧಿಸುವ ಮೂಲಕ ಆರ್ಸಿಬಿ ಕಳೆದ ಪಂದ್ಯಕ್ಕೆ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.
ಡು ಪ್ಲೆಸಿಸ್ ಹೋರಾಟ:ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವನ್ನು ನಾಯಕ ಡು ಪ್ಲೆಸಿಸ್ ಬೃಹತ್ ಮೊತ್ತದತ್ತ ಕೊಂಡೊಯ್ದರು. 50 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಮೇತ 73 ರನ್ (ಔಟಾಗದೇ) ಗಳಿಸಿ ಮಿಂಚಿದರು. ನಾಯಕನಿಗೆ ಉತ್ತಮ ಸಾಥ್ ನೀಡಿದ ಯುವ ಆಟಗಾರ ರಜತ್ ಪಾಟೀದಾರ್ ಅರ್ಧಶತಕ ಬಾರಿಸುವ ಅಂಚಿನಲ್ಲಿ ಔಟಾದರೂ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. 38 ಎಸೆತಗಳಲ್ಲಿ 48 ರನ್ ಬಾರಿಸಿದ ಪಾಟೀದಾರ್, 4 ಬೌಂಡರಿ, 2 ಸಿಕ್ಸರ್ ಸಿಡಿಸಿದರು.
ಮಿಂಚು ಹರಿಸಿದ ಮ್ಯಾಕ್ಸಿ, ಕಾರ್ತಿಕ್:ಪಾಟೀದಾರ್ ಔಟಾದ ಬಳಿಕ ಮೈದಾನಕ್ಕೆ ಬಂದ ಗ್ಲೆನ್ ಮ್ಯಾಕ್ಸವೆಲ್ ಮೊದಲ ಎಸೆತದಿಂದಲೇ ದಂಡಿಸಲು ಶುರು ಮಾಡಿದರು. 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 33 ರನ್ ಗಳಿಸಿ ಕಾರ್ತಿಕ್ ತ್ಯಾಗಿಗೆ ವಿಕೆಟ್ ಒಪ್ಪಿಸಿದರು. ಬಳಿಕ ನಡೆದಿದ್ದೇ ದಿನೇಶ್ ಕಾರ್ತಿಕ್ ಆಟ.
ಇನ್ನಿಂಗ್ಸ್ನ 2 ಓವರ್ ಬಾಕಿ ಇದ್ದಾಗ ಅಂಗಳಕ್ಕಿಳಿದ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 4 ಸಿಕ್ಸರ್ 1 ಬೌಂಡರಿ ಬಾರಿಸಿ 30 ರನ್ಗಳನ್ನು ಚಚ್ಚಿದರು. ಇದು ತಂಡ ಕೊನೆಯ ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.