ಬೆಂಗಳೂರು: ಐಪಿಎಲ್ 16ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಶುಭಾರಂಭ ಮಾಡಿದೆ. ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ವಿರಾಟ್ ಕೊಹ್ಲಿ (82 ಅಜೇಯ) ಮತ್ತು ಫಾಫ್ ಡು ಪ್ಲೆಸಿಸ್(73) ಅಬ್ಬರದ ಬ್ಯಾಟಿಂಗ್ ಮೂಲಕ ಆರ್ಸಿಬಿ ಮೊದಲ ಪಂದ್ಯದಲ್ಲೇ ಜಯ ದಾಖಲಿಸಿದೆ. ರೋಹಿತ್ ಶರ್ಮಾ ಪಡೆ ನೀಡಿದ್ದ ಸವಾಲಿನ 172 ರನ್ಗಳ ಗುರಿಯನ್ನು ಆರ್ಸಿಬಿ ಕೇವಲ 2 ವಿಕೆಟ್ ಕಳೆದುಕೊಂಡು 3.4 ಓವರ್ಗಳು ಬಾಕಿ ಇರುವಾಗಲೇ ಪೂರೈಸಿತು.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಡು ಪ್ಲೆಸಿಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನಾಗಿ ಡು ಪ್ಲೆಸಿಸ್ ಈ ನಿರ್ಧಾರ ಉತ್ತಮವಾಗಿಯೇ ಇತ್ತು. ಮುಂಬೈ ತಂಡವು 50 ರನ್ಗಳು ಕಲೆ ಹಾಕುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಆರ್ಸಿಬಿ ಬೌಲರ್ಗಳು ಉರುಳಿಸಿದರು. ಇದರಿಂದ ರೋಹಿತ್ ಶರ್ಮಾ ಪಡೆ ನೀರಸ ಓಪನಿಂಗ್ ಪಡೆಯಿತು. ಆದರೆ, ತಿಲಕ್ ಮಾರ್ಮ ಅಜೇಯ 84 ರನ್ಗಳ ನೆರವಿನಿಂದ ಮುಂಬೈ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆ ಹಾಕಲು ಸಾಧ್ಯವಾಯಿತು.
ಕೊಹ್ಲಿ - ಡು ಪ್ಲೆಸಿಸ್ ಅಬ್ಬರ: ರೋಹಿತ್ ಪಡೆದ ನೀಡಿದ್ದ 172 ರನ್ಗಳ ಗುರಿ ಬೆನ್ನಟ್ಟಿದ್ದ ಆರ್ಸಿಬಿ ಭರ್ಜರಿ ಓಪನಿಂಗ್ ಪಡೆಯಿತು. ಆರಂಭಿಕ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ನಾಯಕ ಡು ಪ್ಲೆಸಿಸ್ ಮೊದಲ ವಿಕೆಟ್ಗೆ ಅಮೋಘ ಪ್ರದರ್ಶನ ನೀಡಿದರು. ಮುಂಬೈ ಬೌಲರ್ಗಳನ್ನು ದಂಡಿಸಿದ ಇಬ್ಬರು ಬ್ಯಾಟರ್ಗಳು ಆರ್ಸಿಬಿ ಅಭಿಮಾನಿಗಳಿಗೆ ರಸದೌತಣ ನೀಡಿದರು.
ವಿರಾಟ್ ಮತ್ತು ಡು ಪ್ಲೆಸಿಸ್ ಅಬ್ಬರದ ಬ್ಯಾಟಿಂಗ್ನೊಂದಿಗೆ ಆಕರ್ಷಕ ಅರ್ಧಶತಕಗಳನ್ನು ಬಾರಿಸಿದರು. ಮೊದಲ ವಿಕೆಟ್ 148 ರನ್ಗಳ ಜೊತೆಯಾಟವನ್ನು ಈ ಜೋಡಿ ನೀಡಿತು. ಇಬ್ಬರೇ ತಂಡವನ್ನು ಗೆಲ್ಲಿಸಿಕೊಂಡು ಬರುವ ಮುನ್ಸೂಚನೆಯನ್ನೂ ನೀಡಿದ್ದರು. ಆದರೆ, 73 ರನ್ ಬಾರಿಸಿದ್ದ ನಾಯಕ ಡು ಪ್ಲೆಸಿಸ್ ಅರ್ಷದ್ ಖಾನ್ ಬೌಲಿಂಗ್ನಲ್ಲಿ ಔಟಾದರು. 43 ಬಾಲ್ಗಳಲ್ಲಿ ಆರು ಸಿಕ್ಸರ್ ಮತ್ತು ಐದು ಬೌಂಡರಿಗಳ ಸೇಮತ 73 ರನ್ ಸಿಡಿಸಿದರು.