ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 21 ರನ್‌ಗಳ ಜಯ ಸಾಧಿಸಿದೆ. ಕೋಲ್ಕತ್ತಾ ನೀಡಿದ್ದ 201 ರನ್‌ಗಳ ಗುರಿ ಬೆನ್ನಟ್ಟಿದ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಲಷ್ಟೇ ಶಕ್ತವಾಯಿತು. ಮೂರು ವಿಕೆಟ್ ಪಡೆದ ವರುಣ್ ಚಕ್ರವರ್ತಿ ಕೋಲ್ಕತ್ತಾ ಗೆಲುವನ್ನು ಸುಲಭಗೊಳಿಸಿದರು.
ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೀಡಿದ್ದ ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ತಂಡದ ಆರಂಭದಲ್ಲೇ ನೆಲಕಚ್ಚಿತು. ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಮೊದಲ ಎರಡು ಓವರ್‌ಗಳಲ್ಲಿ 30 ರನ್ ಗಳಿಸಿದರು. ಆದರೆ, ಸುಯಶ್ ಶರ್ಮಾ ಎಸೆದ ಮೂರನೇ ಓವರ್ನ ಎರಡನೇ ಬಾಲ್ನಲ್ಲಿ ಡುಪ್ಲೆಸಿಸ್ (17) ರಿಂಕು ಸಿಂಗ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು.
ನಂತರ ಬಂದ ಶಹಬಾಜ್ ಅಹ್ಮದ್ (2) ಅವರನ್ನೂ ಸುಯಶ್ ಎಲ್ಬಿಗೆ ಕೆಡವಿದರು. ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ (5) ಅವರನ್ನು ವರುಣ್ ಚಕ್ರವರ್ತಿ ಪೆವಿಲಿಯನ್ಗೆ ಕಳುಹಿಸಿದರು. ಈ ನಡುವೆ ಕ್ರೀಸ್ಗೆ ಬಂದ ಮಹಿಪಾಲ್ ಲೊಮ್ರೋರ್ (34) ತಂಡಕ್ಕೆ ಆಸರೆಯಾದರು. ಮತ್ತೊಂದೆಡೆ, 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಕೊಹ್ಲಿ (54) ರಸೆಲ್ ಎಸೆತದಲ್ಲಿ ಕ್ಯಾಚಿತ್ತರು. ಇದರಿಂದ ಬೆಂಗಳೂರು 12.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ಗಳಿಗೆ ಕುಸಿದು ಸಂಕಷ್ಟಕ್ಕೆ ಸಿಲುಕಿತು.
ಸುಯಶ್ ಪ್ರಭುದೇಸಾಯಿ (10) ಮತ್ತು ವನಿಂದು ಹಜರಂಕಾ (5) ಕೂಡ ಬೇಗ ಔಟಾದರು. 22 ರನ್ ಗಳಿಸಿ ಆಟವಾಡುತ್ತಿದ್ದ ದಿನೇಶ್ ಕಾರ್ತಿಕ್ ಸಹ ಔಟಾಗಿದ್ದರಿಂದ ಬೆಂಗಳೂರು ಸೋಲಿನ ಸುಳಿಗೆ ಸಿಲುಕಿತು. ಡೇವಿಡ್ ವಿಲ್ಲಿ (11) ಮತ್ತು ವೈಶಾಖ್ ವಿಜಯ್ ಕುಮಾರ್ (13) ಅಜೇಯರಾಗಿ ಉಳಿದರೂ ತಂಡಕ್ಕೆ ಗೆಲುವು ತಂದುಕೊಡಲು ಆಗಿಲ್ಲ. ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ ಮೂರು ವಿಕೆಟ್ ಪಡೆದರೆ, ಸುಯಶ್ ಶರ್ಮಾ ಮತ್ತು ಆಂಡ್ರೆ ರಸೆಲ್ ತಲಾ ಎರಡು ವಿಕೆಟ್ ಪಡೆದರು.