ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ 36ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಲೀಗ್ನಲ್ಲಿ ಈ ವರೆಗೆ ಆಡಿರುವ 7 ಪಂದ್ಯದಲ್ಲಿ 4 ಗೆದ್ದು 8 ಅಂಕದಿಂದ 5ನೇ ಸ್ಥಾನದಲ್ಲಿದೆ. ಈ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧ ಎರಡನೇ ಬಾರಿಗೆ ಎದುರಾಗುತ್ತಿದ್ದು, ಮೊದಲ ಬಾರಿ ಈಡನ್ ಗಾರ್ಡನ್ಸ್ನ ಫೈಟ್ನಲ್ಲಿ ಬೆಂಗಳೂರು ಸೋತು ಕಳಪೆ ರನ್ ರೇಟ್ ಪಡೆದುಕೊಂಡಿತ್ತು. ಈ ಸೋಲಿನ ಸೇಡನ್ನು ಇಂದು ತವರು ನೆಲದಲ್ಲಿ ಆರ್ಸಿಬಿ ತೀರಿಸಿಕೊಳ್ಳಬೇಕಿದೆ.
ಕೆಕೆಆರ್ 7 ಪಂದ್ಯದಲ್ಲಿ 2ನ್ನು ಗೆದ್ದು ಕೇವಲ ನಾಲ್ಕು ಅಂಕಗಳನ್ನು ಗಳಸಿಕೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ಗೆ ಈ ಪಂದ್ಯ ಸೇರಿದಂತೆ ಮುಂದಿನ ಎಲ್ಲ ಪಂದ್ಯಗಳ ಗೆಲುವು ಪಡೆಯಬೇಕಾದ ಸ್ಥಿತಿಯಲ್ಲಿದೆ. ಹಾಗಾಗಿ ಈ ಪಂದ್ಯಗಳು ಕ್ವಾಲಿಫೈಯರ್ಗೆ ಏರಲು ಪ್ರಮುಖವಾಗಿದೆ. ಇದರಿಂದಾಗಿ ಹಾಣಾಹಣಿ ಜೋರಾಗಿರಲಿದೆ. ಸತತ ನಾಲ್ಕು ಸೋಲುಗಳನ್ನು ಕಂಡಿರುವ ರಾಣಾ ಪಡೆ ಐದನೇ ಸೋಲಿನಿಂದ ತಪ್ಪಿಸಿಕೊಳ್ಳಲು ಸಕಲ ಪಯತ್ನಗಳನ್ನು ಮಾಡಬೇಕಿದೆ.
ಆರ್ಸಿಬಿಕೆ ಕೆಜಿಎಫ್ ಬಲ: ರಾಯಲ್ ಚಾಲೆಂಜರ್ಸ್ ನೆಚ್ಚಿಕೊಂಡಿರುವುದು ಮೂವರು ಬ್ಯಾಟರ್ಗಳನ್ನು. ಈ ವರೆಗಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮಾಕ್ಸ್ವೆಲ್ ಮಾತ್ರ ರನ್ ಗಳಿಸುತ್ತಾ ಬಂದಿದ್ದಾರೆ. ಆರಂಭಿಕ ಜೋಡಿ ವಿರಾಟ್ ಮತ್ತು ಫಾಫ್ ಎರಡು ಶತಕದ ಜೊತೆಯಾಟ ಆಡಿದ್ದು, 7 ಪಂದ್ಯದಲ್ಲಿ ಸುಮಾರು 500 ರನ್ ಕಲೆ ಹಾಕಿರುವ ಸಾಧ್ಯತೆ ಇದೆ. ಇನ್ನು ಮ್ಯಾಕ್ಸ್‌ವೆಲ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ನಾಲ್ಕು ಇನ್ನಿಂಗ್ಸ್ನಲ್ಲಿ ಮೂರರಲ್ಲಿ ಅರ್ಧಶತಕದ ಆಟ ಆಡಿದ್ದಾರೆ. ಈ ಕೆಜಿಎಫ್ ಜೋಡಿ 12 ಅರ್ಧಶತಕ ಒಳಗೊಂಡಂತೆ ಈ ವರೆಗೆ 937 ರನ್ ಕಲೆಹಾಕಿದೆ.
ಮಧ್ಯಮ ಕ್ರಮಾಂಕ ವೀಕ್: ಆರ್ಸಿಬಿಯ ಮಧ್ಯಮ ಕ್ರಮಾಂಕ ದುರ್ಬಲವಾಗಿದೆ. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಮಹಿಪಾಲ್ ಲಾಮ್ರೋರ್, ಸುಯಶ್ ಪ್ರಭುದೇಸಾಯಿ ಮತ್ತು ಶಾಬಾಜ್ ಅಹಮದ್ ಬ್ಯಾಟ್ನಿಂದ ರನ್ಗಳು ಬರುತ್ತಿಲ್ಲ. ಈ ಬ್ಯಾಟರ್ಗಳು ಗೇಮ್ ಫಿನಿಶಿಂಗ್ ಜವಾಬ್ದಾರಿಯನ್ನೂ ನಿರ್ವಹಿಸುತ್ತಿಲ್ಲ. ಇದು ತಂಡಕ್ಕೆ ನೆಗೆಟಿವ್ ಅಂಶವಾಗಿದ್ದು, ಎದುರಾಳಿಗಳು ಮೇಲಿನ ಕ್ರಮಾಂಕದ ಮೂವರು ಬ್ಯಾಟರ್ಗಳನ್ನು ಕಟ್ಟಿಹಾಕಲು ತಂತ್ರರೂಪಿಸುತ್ತಿದ್ದಾರೆ.