ಚೆನ್ನೈ:ಇಂದು 14ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ರೈಡರ್ಸ್ ತಂಡ ಮುಖಾಮುಖಿಯಾಗಲಿವೆ.
ಆರ್‌ಸಿಬಿ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಅದ್ಭುತ ಗೆಲುವು ಸಾಧಿಸಿದೆ. ಇಂದಿನ ಪಂದ್ಯ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸುವ ಲೆಕ್ಕಾಚಾರದಲ್ಲಿದೆ.
ಇತ್ತ ಕೆಕೆಆರ್ ತಂಡ ಆಡಿದ ಎರಡು ಪಂದ್ಯಗಳಲ್ಲಿ ಮೊದಲ ಪಂದ್ಯ ಸೋತರೂ, 2ನೇ ಪಂದ್ಯದಲ್ಲಿ ಉತ್ತಮ ಕಮ್ಬ್ಯಾಕ್ ಮಾಡಿ ಜಯ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯ ಉಭಯ ತಂಡಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಮಣಿಸಿ ಶುಭಾರಂಭ ಮಾಡಿದ್ದ ಕೊಹ್ಲಿ ಟೀಂ, ಬಳಿಕ ಹೈದ್ರಾಬಾದ್ ವಿರುದ್ಧ ರೋಚಕ ವಿಜಯ ಪಡೆದಿತ್ತು. ಈ ಮೂಲಕ ಟೂರ್ನಿಯಲ್ಲಿ ಬಲಿಷ್ಠ ತಂಡ ಎನಿಸಿಕೊಂಡಿತ್ತು.
ಪಡಿಕ್ಕಲ್, ಕೊಹ್ಲಿ, ಮ್ಯಾಕ್ಸ್‌ವೆಲ್, ಎಬಿಡಿ, ಕ್ರಿಸ್ಟಿಯನ್, ಜೇಮಿಸನ್ ಆರ್‌ಸಿಬಿಯ ಸ್ಟಾರ್ ಆಟಗಾರರಾಗಿದ್ದಾರೆ. ಆದರೆ ಮೊದಲೆರಡು ಪಂದ್ಯಗಳ ಗೆಲುವಿನಲ್ಲಿ ಯುವ ಹಾಗೂ ಭರವಸೆಯ ಬೌಲರ್‌ಗಳಾದ ಹರ್ಷಲ್ ಪಟೇಲ್ ಹಾಗೂ ಶಾಬಾಜ್ ಅಹ್ಮದ್ ಅವರ ಕೊಡುಗೆ ಮಹತ್ವದ್ದಾಗಿತ್ತು. ಇವರಿಬ್ಬರೂ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಆರ್‌ಸಿಬಿ ಎರಡು ಪಂದ್ಯಗಳನ್ನು ಗೆಲುವು ದಾಖಸಿತ್ತು.
ಪಿಚ್ ರಿಪೋರ್ಟ್
ಚೆನ್ನೈನ ನಿಧಾನಗತಿಯ ಟ್ರ್ಯಾಕ್ ಮೇಲೆ ಹೊಡಿಬಡಿ ಆಟ ನಿರೀಕ್ಷಿಸುವುದು ಕಷ್ಟ. ಹಿಂದಿನ ಪಂದ್ಯಗಳಲ್ಲಿ ಬೌಲರ್‌ಗಳೇ ಮ್ಯಾಚ್ ವಿನ್ನರ್ ಆಗುತ್ತಿರುವುದು ಇದಕ್ಕೆ ಕಾರಣ.
ಮಾರ್ಗನ್ ನಾಯಕತ್ವದ ಕೆಕೆಆರ್ ಅಸ್ಥಿರ ಆಟದಿಂದ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಹೈದರಾಬಾದ್ ವಿರುದ್ಧ ಸೋತೇ ಬಿಟ್ಟಿತು ಎನ್ನುವ ಹಂತದಲ್ಲಿ 10 ರನ್‌ಗಳ ಗೆಲುವು ಸಾಧಿಸಿತು. ಹಾಗೆಯೇ ಮುಂಬೈ ವಿರುದ್ಧ 152 ರನ್ ಚೇಸಿಂಗ್ ವೇಳೆ ಕೆಕೆಆರ್ ಸುಲಭವಾಗಿ ಗೆಲ್ಲಬೇಕಿತ್ತು. ಆದರೆ ಕೊನೆಯ ಹಂತದಲ್ಲಿ ಉತ್ತಮ ಪ್ರದರ್ಶನ ಬರದ ಕಾರಣ 10 ರನ್ಗಳಿಂದ ಎಡವಿತ್ತು.
ಇದನ್ನೂ ಓದಿ: ಕೊಹ್ಲಿ ನಾಯಕತ್ವ ಹೊಗಳಿ,ಇಲ್ಲಿನ ಪಿಚ್ಗಳಲ್ಲಿ ಬೌಲಿಂಗ್ ಮಾಡುವುದು ವಿಭಿನ್ನ ಅನುಭವ ಎಂದ ಜೆಮೀಸನ್!