ಕೋಲ್ಕತ್ತಾ (ಪಶ್ಚಿಮ ಬಂಗಾಳ): ತವರಿನಲ್ಲಿ ಮೊದಲ ಪಂದ್ಯ ಗೆದ್ದು ಐಪಿಎಲ್ನಲ್ಲಿ ಶುಭಾರಂಭ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಗ್ಗರಿಸಿದೆ. 205 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಆರ್ಸಿಬಿ ಕೆಕೆಆರ್ ಬೌಲರ್ಗಳ ದಾಳಿಗೆ ನಲುಗಿತು. ಪರಿಣಾಮ 123 ರನ್ಗಳಿಗೆ ಆಲೌಟ್ ಆಗಿ ಸೋಲು ಅನುಭವಿಸಿತು.
ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ನಿತೀಶ್ ರಾಣಾ ಪಡೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ಗಳನ್ನು ಪೇರಿಸಿತ್ತು. ಈ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ನಾಯಕ ಡು ಪ್ಲೆಸಿಸ್ ಉತ್ತಮ ಆರಂಭ ಒದಗಿಸಿ ಭದ್ರ ಅಡಿಪಾಯ ಹಾಕುವ ಮುನ್ಸೂಚನೆ ನೀಡಿದರು.
ಆದರೆ, ತಂಡದ ಮೊತ್ತ 44 ರನ್ ಆಗಿದ್ದಾಗ ಸುನಿಲ್ ನರೈನ್ ಬೌಲಿಂಗ್ನಲ್ಲಿ ಕೊಹ್ಲಿ (21) ಬೌಲ್ಡ್ ಆದರು. ಇದರ ಬೆನ್ನಲ್ಲೇ ನಾಯಕ ಡು ಪ್ಲೆಸಿಸ್ (23) ಅವರನ್ನು ವರುಣ್ ಚಕ್ರವರ್ತಿ ಬೌಲ್ಡ್ ಮಾಡಿ ಶಾಕ್ ನೀಡಿದರು. ಇದಾದ ಬಳಿಕ ಚಕ್ರವರ್ತಿ ಅವರು ಒಂದೇ ಓವರ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ (5) ಮತ್ತು ಹರ್ಷಲ್ ಪಟೇಲ್ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದರು.
ನಂತರ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಮೈಕಲ್ ಬ್ರೇಸ್ವೆಲ್ (19) ಕ್ಯಾಚಿತ್ತು ನಿರ್ಗಮಿಸಿದರು. ಶಹಬಾಜ್ ಅಹ್ಮದ್ ಅವರನ್ನು 1 ರನ್ಗೆ ನರೈನ್ ಔಟ್ ಮಾಡಿದರು. ಇನ್ನು, ಸುಯಶ್ ಶರ್ಮಾ ಪಾದಾರ್ಪಣೆ ಪಂದ್ಯದಲ್ಲೇ ಆರ್ಸಿಬಿ ಆಟಗಾರರನ್ನು ಕಾಡಿದರು. ದಿನೇಶ್ ಕಾರ್ತಿಕ್ (9), ಅನುಜ್ ರಾವತ್ (1) ಮತ್ತು ಕರ್ಣ್ ಶರ್ಮಾ (1) ವಿಕೆಟ್ ಕಿತ್ತು ಸುಯಶ್ ಶರ್ಮಾ ಮಿಂಚಿದರು. ಆಕಾಶ್ ದೀಪ್ 17 ರನ್ಗೆ ಔಟಾದರು. ಡೇವಿಡ್ ವಿಲ್ಲಿ 20 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಆರ್ಸಿಬಿ 17.4 ಓವರ್ಗಳಲ್ಲಿ 123 ರನ್ಗಳಿಗೆ ಸರ್ವಪತನ ಕಂಡಿತು. ಕೆಕೆಆರ್ ತಂಡ 81 ರನ್ನಿಂದ ಗೆಲುವು ಸಾಧಿಸಿತು. ಇದರೊಂದಿಗೆ ಕೋಲ್ಕತ್ತಾ ಐಪಿಎಲ್ನಲ್ಲಿ ಮೊದಲ ಜಯ ದಾಖಲಿಸಿದರೆ, ಬೆಂಗಳೂರು ಮೊದಲ ಸೋಲು ಕಂಡಿತು.