ನವದೆಹಲಿ: ಮುಂಬೈ ಇಂಡಿಯನ್ಸ್ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಮ್ಮನ್ನು ತಾವು ಸಿದ್ಧವಾಗಿರಿಸಲು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು ಎಂದು ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಟ್ ಚಾಂಪಿಯನ್ಶಿಪ್ಗೆ ತಂಡ ಪ್ರಟಕವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ 9 ದಿನದಲ್ಲಿ ಟೆಸ್ಟ್ ಚಾಂಪಿಯನ್ ಶಿಪ್ ನಡೆಯಲಿದೆ. ಅಂದರೆ ಮೇ 28ಕ್ಕೆ ಐಪಿಎಲ್ ಫೈನಲ್ ಪಂದ್ಯ ನಡೆಯಲಿದ್ದು, ಜೂನ್ 7ರಿಂದ ಲಂಡನ್‌ನ ಓವಲ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆರಂಭವಾಗಲಿದೆ. ಹೀಗಾಗಿ ಐಪಿಎಲ್ನಿಂದ ಕೊನೆ ಸಮಯದಲ್ಲಿ ದೂರ ಉಳಿದು ಚಾಂಪಿಯನ್‌ಶಿಪ್ ಬಗ್ಗೆ ಚಿಂತಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಇದುವರೆಗೆ ಏಳು ಪಂದ್ಯಗಳನ್ನು ಆಡಿದೆ ಮತ್ತು ರೋಹಿತ್ ಅವರ ಬ್ಯಾಟಿಂಗ್ ಫಾರ್ಮ್ ಮಿಶ್ರವಾಗಿದೆ. ಏಳು ಪಂದ್ಯಗಳಲ್ಲಿ ಒಂದು ಅರ್ಧ ಶತಕದೊಂದಿಗೆ 181 ರನ್ ಗಳಿಸಿದ್ದಾರೆ. ಅವರು 25.86ರ ಸರಾಸರಿಯಲ್ಲಿ 135.07ರ ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಬೀಸುತ್ತಿದ್ದಾರೆ.
"ಪ್ರಾಮಾಣಿಕವಾಗಿ, ರೋಹಿತ್ ಕೂಡ ಸದ್ಯಕ್ಕೆ ವಿರಾಮ ತೆಗೆದುಕೊಳ್ಳಬೇಕು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಬೇಕು ಎಂದು ನಾನು ಹೇಳುತ್ತೇನೆ. ಅವರು ಕಳೆದ ಕೆಲವು ಪಂದ್ಯಗಳಿಗೆ ಮತ್ತೆ ಹಿಂತಿರುಗಬಹುದು. ಆದರೆ ಇದೀಗ ಅವರು ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು" ಎಂದು ಗವಾಸ್ಕರ್ ತಿಳಿಸಿದರು.