ಹೈದರಾಬಾದ್:ಸಚಿನ್ ತೆಂಡೂಲ್ಕರ್ ಅವರನ್ನೊಮ್ಮೆ, ನಿಮ್ಮ ದಾಖಲೆಗಳನ್ನು ಯಾರು ಮುರಿಯಬಹುದು ಎಂದು ಮಾಧ್ಯಮದವರು ಕೇಳಿದ್ದರು. ಆಗ ಅವರು, ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ದಾಖಲೆ ಮುರಿಯಬಲ್ಲರು ಎಂದು ಹೇಳಿದ್ದರು. ಅದರಂತೆ ಈ ಇಬ್ಬರೂ ಬ್ಯಾಟರ್ಗಳು ಅಂತಾರಾಷ್ಟ್ರೀಯ ಮತ್ತು ಲೀಗ್ ಕ್ರಿಕೆಟ್ನಲ್ಲಿ ತಮ್ಮದೇ ಮೈಲಿಗಲ್ಲುಗಳನ್ನು ಸಾಧಿಸುತ್ತಾ ಬಂದಿದ್ದಾರೆ.
ಇಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆಯುವ ಸಾಧ್ಯತೆ ಇದೆ. ಅಂಕಿಅಂಶಗಳಂತೆ, ಅವರ ಅಚ್ಚುಮೆಚ್ಚಿನ ಕ್ರೀಡಾಂಗಣಗಳಲ್ಲಿ ಒಂದಾದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಲಿದೆ. ಇಂದು ಅವರ ಬ್ಯಾಟ್ನಿಂದ ಮತ್ತೊಂದು ದಾಖಲೆಯ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಐಪಿಎಲ್‌ನಲ್ಲಿ ರೋಹಿತ್ ರನ್ ಗಳಿಕೆ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ 14 ರನ್ ಗಳಿಸಿದರೆ ಐಪಿಎಲ್‌ನಲ್ಲಿ 6,000 ರನ್ ಗಳಿಸಿದ ನಾಲ್ಕನೇ ಆಟಗಾರನಾಗಲಿದ್ದಾರೆ. ಶರ್ಮಾ ಐಪಿಎಲ್‌ನಲ್ಲಿ ಇದುವರೆಗೆ 231 ಪಂದ್ಯಗಳಲ್ಲಿ 226 ಇನ್ನಿಂಗ್ಸ್ ಆಡಿದ್ದು 5986 ರನ್ ಗಳಿಸಿದ್ದಾರೆ. 28 ಬಾರಿ ಅಜೇಯ ಇನ್ನಿಂಗ್ಸ್ ಕಟ್ಟಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 41 ಅರ್ಧ ಶತಕಗಳು ಸೇರಿವೆ. ಈ ವೇಳೆ ಅವರು 529 ಬೌಂಡರಿ ಹಾಗೂ 247 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ 38.83 ಸರಾಸರಿಯಲ್ಲಿ ಒಟ್ಟು 466 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧಶತಕಗಳು ಸೇರಿವೆ. ಇಲ್ಲಿ ಅವರ ಸ್ಟ್ರೈಕ್ ರೇಟ್ ಕೂಡ 139.10 ಆಗಿದೆ. ಹಾಗಾಗಿಯೇ ರೋಹಿತ್ ಶರ್ಮಾರಿಗೆ ಈ ಕ್ರೀಡಾಂಗಣ ಅಚ್ಚುಮೆಚ್ಚು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್ ಘರ್ಜಿಸಿದರೆ, ಐಪಿಎಲ್‌ನಲ್ಲಿ 6000 ರನ್ ಪೂರೈಸಿದ ಆಟಗಾರರ ಸಾಲಿಗೆ ಸೇರಲಿದ್ದಾರೆ.
2023ರ ಐಪಿಎಲ್ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನಾಲ್ಕು ಪಂದ್ಯಗಳಿಂದ 107 ರನ್ ಗಳಿಸಿದ್ದಾರೆ. ಬೆಂಗಳೂರು ವಿರುದ್ಧ 1, ಚೆನ್ನೈ ವಿರುದ್ಧ 21, ಡೆಲ್ಲಿ ಕ್ಯಾಪಿಟಲ್ಸ್ ಎದುರು 65 ಮತ್ತು ಕಳೆದ ಕೆಕೆಆರ್ ಪಂದ್ಯದಲ್ಲಿ 20 ರನ್ ಗಳಿಸಿದ್ದಾರೆ. ಡೆಲ್ಲಿ ವಿರುದ್ಧ ಅವರು ಅರ್ಧಶತಕದ ಮೂಲಕ ಉತ್ತಮ ಲಯದಲ್ಲಿ ಕಂಡುಬಂದರು. ಹೀಗಾಗಿ ರೋಹಿತ್ ಶರ್ಮಾ ಇಂದು ದೊಡ್ಡ ಇನ್ನಿಂಗ್ಸ್ ಕಟ್ಟುತ್ತಾರೆ ಎಂಬ ನಿರೀಕ್ಷೆ ಮನೆಮಾಡಿದೆ.
ಇದುವರೆಗೆ ಐಪಿಎಲ್‌ನಲ್ಲಿ 6000 ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಹೆಸರು ಸೇರಿದೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 6844 ರನ್ ಗಳಿಸಿದ್ದರೆ, ಶಿಖರ್ ಧವನ್ 6477 ರನ್ ಗಳಿಸಿದ್ದಾರೆ. ಡೇವಿಡ್ ವಾರ್ನರ್ 6109 ರನ್ ಗಳಿಸಿದ್ದು, ಅವರು ಈ ವರ್ಷದ ಆವೃತ್ತಿಯಲ್ಲಿ ಈ ಪಟ್ಟಿಯನ್ನು ಸೇರಿದ್ದಾರೆ.
ಇದನ್ನೂ ಓದಿ:ವಿಕೆಟ್ ಉರುಳಿದ್ದಕ್ಕೆ 'ವಿಶೇಷ'ವಾಗಿ ಸಂಭ್ರಮಿಸಿದ ಕೊಹ್ಲಿಗೆ ದಂಡದ ಬಿಸಿ