ದೆಹಲಿ:ಕಳೆದ ವರ್ಷಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸದ್ಯ ಚೇತರಿಕೆ ಹಾದಿಯಲ್ಲಿರುವ ಟೀಂ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್ ತಾವು ಐಪಿಎಲ್‌ನಲ್ಲಿ ಪ್ರತಿನಿಧಿಸುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೆಂಬಲ ನೀಡಲು ಇಂದು ಅರುಣ್ ಜೇಟ್ಲಿ ಸ್ಟೇಡಿಯಂಗೆ ಆಗಮಿಸಿ ಗಮನ ಸೆಳೆದರು. ತವರಿನಲ್ಲಿ ನಡೆಯುತ್ತಿರುವ ಪಂದ್ಯವನ್ನು ಕ್ರೀಡಾಂಗಣಕ್ಕೆ ಬಂದು ಮಾಜಿ ನಾಯಕ ಕಣ್ತುಂಬಿಕೊಳ್ಳುತ್ತಿದ್ದಾರೆ. ಪಂತ್ ಬಿಳಿ ಟಿ ಶರ್ಟ್ ಧರಿಸಿ ಪಂದ್ಯ ಎಂಜಾಯ್ ಮಾಡುತ್ತಿರುವ ವಿಡಿಯೋ, ಫೋಟೋಗಳು ವೈರಲ್ ಆಗಿವೆ.
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಪಂತ್ ಅವರೊಂದಿಗಿನ ಸೆಲ್ಫಿ ಫೋಟೋ ಹಂಚಿಕೊಂಡಿದೆ. ವೀಕ್ಷಕರ ಸ್ಟ್ಯಾಂಡ್ಗೆ ಪಂತ್ ಊರುಗೋಲುಗಳ ಆಸರೆ ತೆಗೆದುಕೊಂಡು ಬಂದು ಕುಳಿತುಕೊಂಡಿದ್ದಾರೆ.
ರಿಷಬ್ ಪಂತ್ ಕ್ರೀಡಾಂಗಣಕ್ಕೆ ಬಂದಿರುವ ವಿಡಿಯೋವನ್ನು ಹಂಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ನಮ್ಮ 13ನೇ ಆಟಗಾರ ಎಂದು ಬರೆದುಕೊಂಡಿದೆ. ವಿಡಿಯೋದಲ್ಲಿ ಪಂತ್ ಜೊತೆಗೆ ರಾಜೀವ್ ಶುಕ್ಲಾ ಅವರು ಮಾತನಾಡುತ್ತಿರುವುದನ್ನು ನೋಡಬಹುದು. ಇದೇ ವೇಳೆ ಪಂತ್ ಕ್ಯಾಮರಾದತ್ತ ಕೈ ಬೀಸಿ ಅಭಿಮಾನಿಗಳಿಗೆ ವಿಶ್ ಮಾಡಿದರು.
ಮೊದಲ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಡಗೌಟ್‌ನ ಮೇಲೆ ರಿಷಬ್ ಪಂತ್ ಜೆರ್ಸಿ ಪ್ರದರ್ಶಿಸುವ ನೆನಪಿಸಿಕೊಂಡಿತ್ತು. ಆದರೆ ಬಿಸಿಸಿಐ ಕ್ರಮ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ದೆಹಲಿ ಫ್ರಾಂಚೈಸಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಅಹಿತಕರ ಘಟನೆ ಅಥವಾ ಆಟಗಾರನ ನಿವೃತ್ತಿಯ ನಂತರ ಜೆರ್ಸಿ ಸೂಟ್‌ಗಳನ್ನು ನೇತುಹಾಕುವುದು ಸಾಮಾನ್ಯ. ಆದರೆ ಗಾಯಗೊಂಡು ಹೊರಗಿರುವವರಿಗೆ ಈ ರೀತಿ ಮಾಡುವುದು ಸಮಂಜಸವಲ್ಲ ಎಂದಿತ್ತು.