ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನೋದು ಭಾರತದಲ್ಲಿ ಮಹಾ ಮನರಂಜನೆ. ಈ ಮನರಂಜನೆಯನ್ನು ಎಲ್ಲರ ಕೈಗೆಟಕುವಂತೆ ಜಿಯೋ ಸಂಸ್ಥೆ ಪುಕ್ಕಟೆಯಾಗಿ ನೀಡುತ್ತಿದೆ. ಇದೇ ವೇಳೆ ಸಂಸ್ಥೆ ಕೋಟಿ ಕೋಟಿ ಲಾಭ ಗಳಿಸುತ್ತಿದೆ. ಉಚಿತವಾಗಿ ಕ್ರಿಕೆಟ್ ಮ್ಯಾಚ್ ವೀಕ್ಷಣೆಯ ಅನುಕೂಲ ಒದಗಿಸಿ ಕೋಟ್ಯಂತರ ಸಂಪಾದನೆ ಗಳಿಸುತ್ತಿರುವುದು ಹೇಗೆನ್ನುವಿರಾ?. ಹೌದು, ಜಿಯೋ ಡಿಜಿಟಲ್ ವೇದಿಕೆಗೆ ಐಪಿಎಲ್ ಸಮಯದಲ್ಲಿ ಜಾಹೀರಾತು ನೀಡಲು ಕಂಪನಿಗಳು ಮುಗಿಬಿದ್ದಿವೆ.
ಮೊದಲ ವಾರದಲ್ಲಿ ಜಾಹೀರಾತು ನೀಡಲು 23 ಸಂಸ್ಥೆಗಳು ಮುಂದೆ ಬಂದಿವೆ. ಇದು ಭಾರತದ ಡಿಜಿಟಲ್ ಸ್ಟ್ರೀಮಿಂಗ್‌ನಲ್ಲಿರುವ ಎಲ್ಲಾ ಕಾರ್ಯಕ್ರಮಗಳಿಗಿಂತಲೂ ಹೆಚ್ಚು ಪ್ರಾಯೋಜಕರಿರುವ ಪ್ರಸಾರ ಎಂದು ಜಿಯೋಸಿನಿಮಾ ತಿಳಿಸಿದೆ. ಡ್ರೀಮ್ 11 ಸಹ-ಪ್ರಸ್ತುತಿ ಪ್ರಾಯೋಜಕರಾಗಿದ್ದರೆ, ಜಿಯೋ ಮಾರ್ಟ್, ಫೋನ್ಪೇ ಮತ್ತು ಟಿಯಾಗೂ ಇವಿ ಕೋ ಪವರ್ಡ್ ಪ್ರಾಯೋಜಕರು. ಅಪ್ಪಿ ಫಿಝಿ, ಇಟಿ ಮನಿ, ಕ್ಯಾಸ್ಟ್ರಾಲ್, ಟಿವಿಎಸ್, ಬಿಂಗೋ, ಸ್ಟಿಂಗ್, ಅಜಿಯೋ, ರುಪೆ, ಲೂಯಿಸ್-ಫಿಲಿಪ್ ಜೀನ್ಸ್, ಅಮೆಝಾನ್, ರ್‍ಯಾಪಿಡೋ, ಅಲ್ಟ್ರಾ ಟೆಕ್ ಸಿಮೆಂಟ್, ಪುಮಾ, ಕಮಲ್ ಪಸಂದ್, ಕಿಂಗ್ ಫಿಶರ್ ಪವರ್ ಸೋಡಾ, ಜಿಂದಾಲ್ ಪ್ಯಾಂಥರ್ ಟಿಎಂಟಿ ರೆಬಾರ್ ಮತ್ತು ಇಂಡೀಡ್ಗಳು ಸಹ ಪ್ರಾಯೋಜಕ್ವ ನೀಡಿವೆ.
"ಜಿಯೋಸಿನಿಮಾದಲ್ಲಿ ಸೈನ್ ಅಪ್ ಮಾಡಿದ ಜಾಹೀರಾತುದಾರರ ಸಂಖ್ಯೆ ಹೊಸ ದಾಖಲೆಯಾಗಿದೆ. ಡಿಜಿಟಲ್‌ನಲ್ಲಿ ಕಳೆದ ವರ್ಷಕ್ಕಿಂತ ಗಮನಾರ್ಹವಾಗಿ ಇದು ಹೆಚ್ಚಾಗಿದೆ. ಭೋಜ್‌ಪುರಿ, ಪಂಜಾಬಿ, ಮರಾಠಿ ಮತ್ತು ಗುಜರಾತಿ ಭಾಷಾ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಸ್ಥಳೀಯ ಭಾಷೆಯ ಪ್ರಸಾರವನ್ನು ಜನ ಇಷ್ಟಪಡುತ್ತಿದ್ದಾರೆ" ಎಂದು ವಯಾಕಾಂ18 ಸ್ಪೋರ್ಟ್ಸ್ನ ಸಿಇಒ ಅನಿಲ್ ಜಯರಾಜ್ ಹೇಳಿದ್ದಾರೆ.