ಕರ್ನಾಟಕ

karnataka

ETV Bharat / sports

''Real King Virat Kohli'': ವಿರಾಟ್​ ಬ್ಯಾಟಿಂಗ್​ ಕೊಂಡಾಡಿದ ಪಾಕ್​ ಕ್ರಿಕೆಟಿಗ, ಬಾಬರ್​ ಫ್ಯಾನ್ಸ್​ಗೆ ಟಾಂಗ್​!

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಬೆಂಗಳೂರು ತಂಡ 8 ವಿಕೆಟ್​ಗಳ ಅದ್ಭುತ ಜಯ ದಾಖಲಿಸಿದೆ. ವಿರಾಟ್​ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಕ್ರಿಕೆಟ್​ ದಿಗ್ಗಜರು, ಅಭಿಮಾನಿಗಳಿಂದ ಹೊಗಳಿಕೆಗೆ ಪಾತ್ರರಾಗಿದ್ದಾರೆ.

Real King Virat Kohli : Mohammad Amir tweet after virat kohli IPL hundred
''Real King Virat Kohli'' : ವಿರಾಟ್​ ಬ್ಯಾಟಿಂಗ್​ ಬಣ್ಣಿಸಿದ ಪಾಕ್​ ಕ್ರಿಕೆಟಿಗ

By

Published : May 19, 2023, 8:00 AM IST

ಹೈದರಾಬಾದ್​ :ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್) ಗುರುವಾರದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್​​ಗಳ ಅಮೋಘ ಜಯ ದಾಖಲಿಸಿತು. ಬೃಹತ್​ ಮೊತ್ತ ಬೆನ್ನಟ್ಟುವಲ್ಲಿ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಭರ್ಜರಿ ಶತಕ ಗಳಿಸುವ ಮೂಲಕ ಆರ್​ಸಿಬಿ ಪರ ಹೀರೋ ಆದರು. ಐಪಿಎಲ್​​ ಇತಿಹಾಸದ 6ನೇ ಶತಕ ಸಿಡಿಸಿದ ವಿರಾಟ್​ ಬ್ಯಾಟಿಂಗ್​ ವೈಭವಕ್ಕೆ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಸೇರಿದಂತೆ ಹಲವು ಕ್ರಿಕೆಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕ್ರಿಸ್‌ ಗೇಲ್ ದಾಖಲೆ ಸರಿಗಟ್ಟಿದ ಕೊಹ್ಲಿ: 187 ರನ್​ ಗೆಲುವಿನ ಗುರಿ ಪಡೆದ ರಾಯಲ್ ಚಾಲೆಂಜರ್ಸ್​​ಗೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ​ ವಿರಾಟ್ ಕೊಹ್ಲಿ 17.5 ಓವರ್​​ಗಳಲ್ಲಿ 172 ರನ್​ಗಳ ಸಿಡಿಲಬ್ಬರದ ಆರಂಭಿಕ ಜೊತೆಯಾಟ ನೀಡಿದರು. ಆರಂಭದಿಂದಲೂ ಹೈದರಾಬಾದ್​ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಪ್ಲೇಆಫ್​ಗೆ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಲು ಪ್ರಮುಖ ಕೊಡುಗೆ ನೀಡಿತು. ಅರ್ಧಶತಕದ ಗಡಿ ದಾಟಿದ ಬಳಿಕ ಮತ್ತಷ್ಟು ಆಕ್ರಮಣಕಾರಿ ಬ್ಯಾಟಿಂಗ್​ ತೋರಿದ ವಿರಾಟ್​ 63 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್​ ಸಹಿತ 100 ರನ್​ ಬಾರಿಸಿ ಔಟಾದರು. ಇದು ಐಪಿಎಲ್​ನಲ್ಲಿ ಕೊಹ್ಲಿ ಬಾರಿಸಿದ 6ನೇ ಶತಕವಾಗಿದ್ದು, ಮಾಜಿ ಆರ್​ಸಿಬಿ ಆಟಗಾರ ಕ್ರಿಸ್​ ಗೇಲ್ (6 ಶತಕ)​​ ದಾಖಲೆ ಸರಿಗಟ್ಟಿದರು. ರಾಜಸ್ಥಾನ ತಂಡದ ಜೋಸ್​ ಬಟ್ಲರ್​ 5 ಶತಕ ಸಿಡಿಸಿದ್ದು, ನಂತರದ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಈ ಬಾರಿಯ ಐಪಿಎಲ್​ನಲ್ಲಿ ಒಟ್ಟಾರೆ 6 ಅರ್ಧಶತಕ ಹಾಗೂ 1 ಶತಕ ಗಳಿಸಿದ್ದು, ಇದುವರೆಗೆ 13 ಪಂದ್ಯಗಳಿಂದ 538 ರನ್​ಗಳೊಂದಿಗೆ ಅಗ್ರ 4ನೇ ಸ್ಥಾನದಲ್ಲಿದ್ದಾರೆ. ಸಿಕ್ಸರ್​ ಮೂಲಕ ಶತಕ ತಲುಪಿದ ಕೊಹ್ಲಿ 2018ರ ನಂತರ ಐಪಿಎಲ್ ಬಳಿಕ ಮೊದಲ ಬಾರಿಗೆ ಈ ಸೀಸನ್‌ನಲ್ಲಿ 500 ರನ್‌ ಗಡಿ ದಾಟಿದ್ದಾರೆ. ಕೊಹ್ಲಿ ಅಬ್ಬರದ ಬ್ಯಾಟಿಂಗ್​ ಅನೇಕ ಕ್ರಿಕೆಟ್​ ದಿಗ್ಗಜರು ಹಾಡಿಹೊಗಳಿದ್ದಾರೆ.

ಮೊಹಮ್ಮದ್ ಅಮೀರ್ ಮೆಚ್ಚುಗೆ: ಈ ಬಗ್ಗೆ ಟ್ವೀಟ್​ ಮಾಡಿರುವ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್, ''ಎಂತಹ ಇನ್ನಿಂಗ್ಸ್, ವಿರಾಟ್​​ ಕೊಹ್ಲಿ ಏಕೈಕ ನಿಜವಾದ ಕಿಂಗ್​'' ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್​ ಜಗತ್ತಿನಲ್ಲಿ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಪಾಕ್​ ನಾಯಕ ಬಾಬರ್ ಅಜಮ್​ರನ್ನು ಅವರ ಅಭಿಮಾನಿಗಳು ಬ್ಯಾಟಿಂಗ್ ರಾಜ ಎಂದೂ ಕರೆಯುತ್ತಾರೆ. ಅವರನ್ನು ವಿರಾಟ್​ ಕೊಹ್ಲಿ ಜೊತೆಗೂ ಹೋಲಿಕೆ ಮಾಡಲಾಗುತ್ತದೆ. ಈ ನಡುವೆ ಸದ್ಯ ಪಾಕ್​ ತಂಡದಲ್ಲಿ ಸ್ಥಾನ ಪಡೆಯದ ಅಮೀರ್​ ಕೊಹ್ಲಿಯನ್ನು ನಿಜವಾದ ಕಿಂಗ್​ ಎನ್ನುವ ಮೂಲಕ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

ಇನ್ನುಳಿದಂತೆ, ಭಾರತ ತಂಡದ ಮಾಜಿ ಆಟಗಾರರಾದ ಆಲ್​ರೌಂಡರ್​​ ಯುವರಾಜ್ ಸಿಂಗ್, ಸುರೇಶ್​ ರೈನಾ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಹೈದರಾಬಾದ್​ನಲ್ಲಿ ವಿಶೇಷ ಇನ್ನಿಂಗ್ಸ್​ ಕಟ್ಟಿದ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ''ಮೊದಲ ಎಸೆತದಿಂದಲೇ ಕವರ್ ಡ್ರೈವ್ ಆಡಿದಾಗಲೇ ಇದು ವಿರಾಟ್‌ ದಿನ ಎಂಬುದು ಸ್ಪಷ್ಟವಾಗಿತ್ತು. ವಿರಾಟ್ ಮತ್ತು ಫಾಫ್ ಇಬ್ಬರೂ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಭರ್ಜರಿ ಹೊಡೆತ ಮಾತ್ರವಲ್ಲದೆ ಯಶಸ್ವಿ ಜೊತೆಯಾಟದೊಂದಿಗೆ, ಸ್ಟ್ರೈಕ್​ ಬದಲಾವಣೆ ಮೂಲಕವೂ ಉತ್ತಮ ರನ್​ ಪೇರಿಸಿದರು. ಇಬ್ಬರ ಬ್ಯಾಟಿಂಗ್​ ಎದುರು 186 ರನ್​ ದೊಡ್ಡ ಮೊತ್ತವಾಗಿರಲಿಲ್ಲ'' ಎಂದು ಸಚಿನ್​ ಟ್ವೀಟ್​ ಮಾಡಿದ್ದಾರೆ.

''All rise for the King ? ಎಂತಹ ಅದ್ಭುತ ಇನ್ನಿಂಗ್ಸ್ ವಿರಾಟ್​ ಕೊಹ್ಲಿ? ವೀಕ್ಷಿಸುವುದೇ ಒಂದು ಸತ್ಕಾರ!'' ಎಂದು ಯುವರಾಜ್​ ಸಿಂಗ್​ ಟ್ವೀಟ್​ನಲ್ಲಿ ಬಣ್ಣಿಸಿದ್ದಾರೆ. ''What a day of cricket! ಮತ್ತೊಂದು ಭವ್ಯ ಶತಕ ದಾಖಲಿಸಿದ ವಿರಾಟ್​ ಕೊಹ್ಲಿ, ಬ್ಯಾಟಿಂಗ್​ ನೈಪುಣ್ಯತೆ ಹಾಗೂ ದೃಢತೆಯನ್ನು ಪ್ರದರ್ಶಿಸಿದ್ದಾರೆ. ನಿಜವಾದ ಬ್ಯಾಟಿಂಗ್ ಪ್ರತಿಭೆ! ಫಾಫ್ ಇನ್ನಿಂಗ್ಸ್​ ಕೂಡ ಅದ್ಭುತವಾಗಿತ್ತು'' ಎಂದು ಸುರೇಶ್​ ರೈನಾ ಟ್ವೀಟ್ ಮೂಲಕ ಕೊಂಡಾಡಿದ್ದಾರೆ.

ಆರ್‌ಸಿಬಿ ಪ್ಲೇಆಫ್‌ ಹಾದಿ ಹೇಗಿದೆ?: ಹೈದಾರಾಬಾದ್​ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್​ ಕನಸು ಜೀವಂತವಾಗಿದ್ದು, ಮುಂದಿನ ಪಂದ್ಯದಲ್ಲಿ ಲೀಗ್​ ಹಂತದ ಕೊನೆಯ ಹಣಾಹಣಿಯಲ್ಲಿ ಮೇ 21ರಂದು ಆರ್​ಸಿಬಿಯು ಗುಜರಾತ್​ ವಿರುದ್ಧ ಆಡಲಿದೆ. ಈ ಪಂದ್ಯ ಗೆದ್ದರೆ ಪ್ಲೇಆಫ್ ತಲುಪಲಿದೆ. ನಿರ್ಣಾಯಕ ಹಂತಕ್ಕೇರಲು ಚೆನ್ನೈ, ಮುಂಬೈ, ಲಕ್ನೋ, ರಾಜಸ್ಥಾನ ಹಾಗೂ ಬೆಂಗಳೂರು ತಂಡಗಳ ನಡುವೆ ತೀವ್ರ ಪೈಪೋಟಿ ಇದ್ದು, ಎಲ್ಲ ತಂಡಗಳಿಗೂ ತಲಾ ಒಂದು ಪಂದ್ಯ ಬಾಕಿ ಇರುವುದರಿಂದ ರೋಚಕತೆ ಸೃಷ್ಟಿಸಿದೆ. ಗುಜರಾತ್ ಟೈಟಾನ್ಸ್​ ಪ್ಲೇಆಫ್ ಬಾಗಿಲು ತಟ್ಟಿದ ಏಕಮಾತ್ರ ಟೀಂ ಆಗಿದೆ.

ABOUT THE AUTHOR

...view details