ಹೈದರಾಬಾದ್ (ತೆಲಂಗಾಣ):ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಅವರ ಅರ್ಧಶತಕ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಂಟು ವಿಕೆಟ್ಗಳ ಜಯಭೇರಿ ಬಾರಿಸಿದೆ. ಎಸ್ಆರ್ಹೆಚ್ ನೀಡಿದ್ದ 187 ರನ್ಗಳ ಸವಾಲಿನ ಗುರಿಯನ್ನು ಆರ್‌ಸಿಬಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಾಗಲೇ ಪೂರೈಸಿ ಗೆಲುವಿನ ಕೇಕೆ ಹಾಕಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಹೆನ್ರಿಕ್ ಕ್ಲಾಸೆನ್ ಅವರ ಸಿಡಿಲಬ್ಬರದ ಶತಕದೊಂದಿಗೆ ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 186 ರನ್ಗಳನ್ನು ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ನಾಯಕ ಡುಪ್ಲೆಸಿಸ್ ಭರ್ಜರಿ ಆರಂಭ ಒದಗಿಸಿದರು.
ಆರ್‌ಸಿಬಿ ಪರ 17.5 ಓವರ್ಗಳಲ್ಲಿ ವಿರಾಟ್ ಮತ್ತು ಡುಪ್ಲೆಸಿಸ್ ಮೊದಲ ವಿಕೆಟ್ಗೆ ದಾಖಲೆಯ 172 ರನ್ಗಳ ಜೊತೆಯಾಟ ನೀಡಿದರು. ವಿರಾಟ್ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 63 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಮೇತ 100 ರನ್ ಸಿಡಿಸಿದರು. ಈ ಮೂಲಕ 2018ರ ಬಳಿಕ ಕಿಂಗ್ ಕೊಹ್ಲಿ ಮೊದಲ ಶತಕ ದಾಖಲಿಸಿದರು. ಮತ್ತೊಂದೆಡೆ, ಅದ್ಬುತ ಸಾಥ್ ನೀಡಿದ ಡುಪ್ಲೆಸಿಸ್ 47 ಬಾಲ್ಗಳನ್ನು ಎದುರಿಸಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ಗಳೊಂದಿಗೆ 71 ರನ್ ಕಲೆ ಹಾಕಿದರು. ಈ ವೇಳೆ ಆರ್‌ಸಿಬಿ 18.2 ಓವರ್ಗಳಲ್ಲಿ 177 ರನ್ ಪೇರಿಸಿ ಗೆಲುವಿನ ಅಂಚಿಗೆ ತಲುಪಿತ್ತು.