ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹತ್ತು ತಂಡಗಳಿರಬಹುದು. ಆದರೆ, ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವರುವುದು ಕೇವಲ ಎರಡೇ ತಂಡಗಳು. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇರುವ ಅಭಿಮಾನಿಗಳೇ ಹೆಚ್ಚು. ಅದರ ನಂತರದ ಸ್ಥಾನ ಚೆನ್ನೈ ಸೂಪರ್ ಕಿಂಗ್ಸ್ಗೆ ಇದೆ. ಇದಕ್ಕೆ ಕಾರಣ ಭಾರತ ತಂಡದ ಇಬ್ಬರು ಮಾಜಿ ನಾಯಕರುಗಳಾದ ವಿರಾಟ್ ಕೊಹ್ಲಿ ಮತ್ತು ಧೋನಿ ಎಂದರೆ ತಪ್ಪಾಗಲಾರದು. ಈ ಇಬ್ಬರು ಕ್ರೀಸ್ನಲ್ಲಿ ಆಡುವುದನ್ನು ನೋಡಲು ಜನ ಕಾತುರದಿಂದ ಕಾಯುತ್ತಿರುತ್ತಾರೆ.
ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಂಗಣ ಮೂಲೆ ಮೂಲೆಯೂ ಪ್ರೇಕ್ಷಕರಿಂದ ಭರ್ತಿಯಾಗಿತ್ತು. ಇದಲ್ಲದೇ ಆನ್ಲೈನ್ ವೀಕ್ಷಣೆಯೂ ಅತಿ ಹೆಚ್ಚಿನ ಪ್ರೇಕ್ಷಕರನ್ನು ಗಳಿಸಿ ದಾಖಲೆ ಬರೆದಿದೆ. ಇದು ಮತ್ತೊಮ್ಮೆ ಈ ಎರಡು ತಂಡಗಳಿಗೆ ಇರುವ ಅಭಿಮಾನಿಗಳ ಬಗ್ಗೆ ಹೇಳುತ್ತದೆ. ಪಂದ್ಯ ಪ್ರತಿ ಹಂತದಲ್ಲೂ ಕುತೂಹಲಕಾರಿಯಾಗಿತ್ತು. ಫಲಿತಾಂಶ ನಿರ್ಣಯಕ ಕೊನೆಯ ಓವರ್ ಈ ಹಿಂದಿನ ಎಲ್ಲ ರೆಕಾರ್ಡ್ಗಳನ್ನು ಪುಡಿ ಮಾಡಿದೆ.
ಬತ್ತದ ಧೋನಿ ಮೇಲಿನ ಪ್ರೀತಿ: ಮಹೇಂದ್ರ ಸಿಂಗ್ ಧೋನಿ ಈ ಹೆಸರು ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೇ ಇತರರಿಗೂ ಪರಿಚಿತ. ಐಸಿಸಿಯ ಎಲ್ಲ ಟ್ರೋಫಿಗಳನ್ನು ಗೆದ್ದ ಚಾಣಾಕ್ಷ ಭಾರತದ ಮಾಜಿ ನಾಯಕ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿ ನಾಲ್ಕು ವರ್ಷ ಕಳೆದರೂ ಅಭಿಮಾನಿಗಳ ಸಂಖ್ಯೆ ಇಳಿಕೆಯಾಗಿಲ್ಲ. ಧೋನಿ ಬ್ಯಾಟ್ ಹಿಡಿದರೆ ಅಭಿಮಾನಿಗಳು ಅವರನ್ನು ಈಗಲೂ ನೋಡಲು ಇಷ್ಟ ಪಡುತ್ತಾರೆ. ಇದಕ್ಕೆ ಉದ್ಘಾಟನಾ ಪಂದ್ಯವೇ ಸಾಕ್ಷಿಯಾಗಿತ್ತು. ಧೋನಿ ಬ್ಯಾಟಿಂಗ್ ಬಂದಾಗ 1.6 ಕೋಟಿ ವೀಕ್ಷಣೆ ಗಳಿಸಿದ್ದು ದಾಖಲೆಯಾಗಿತ್ತು. ನಿನ್ನೆ ಕೊನೆಯ ಬಾಲ್ಗೆ ಧೋನಿ ಕಣಕ್ಕಿಳಿದಾಗ ಆನ್ಲೈನ್ ಜಿಯೋ ಸಿನಿಮಾ ವೇದಿಕೆಯಲ್ಲಿ 22 ಮಿಲಿಯನ್ ಪ್ರೇಕ್ಷಕರು ವೀಕ್ಷಣೆ ಮಾಡಿದ್ದಾರೆ.