ನವದೆಹಲಿ :ಯುಎಇಯಲ್ಲಿ ನಡೆಯಲಿರುವ 14ನೇ ಆವೃತ್ತಿಯ 2ನೇ ಹಂತದ ಐಪಿಎಲ್ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬದಲಿ ಆಟಗಾರನಾಗಿ ಇಂಗ್ಲೆಂಡ್ ಯುವ ವೇಗಿ ಜಾರ್ಜ್ ಗಾರ್ಟನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಸೆಪ್ಟೆಂಬರ್ 19ರಿಂದ 2021ರ ಮುಂದುವರಿದ ಐಪಿಎಲ್ ಯುಎಇಯಲ್ಲಿ ಆರಂಭವಾಗಲಿದೆ. ಈ ಲೀಗ್ಗೆ ಕೆಲವು ಆಟಗಾರರು ವೈಯಕ್ತಿಕ ಮತ್ತು ರಾಷ್ಟ್ರೀಯ ತಂಡಗಳ ಕರ್ತವ್ಯದಿಂದ ಗೈರಾಗಲಿದ್ದಾರೆ. ಈಗಾಗಲೇ ಫ್ರಾಂಚೈಸಿ ಕೂಡ ಬದಲಿ ಆಟಗಾರರನ್ನು ಘೋಷಿಸುತ್ತಿದ್ದು, ಆರ್ಸಿಬಿ ತನ್ನ ನಾಲ್ಕನೇ ಬದಲಿ ಆಟಗಾರನನ್ನು ಬುಧವಾರ ಘೋಷಿಸಿದೆ.
ಶನಿವಾರ ಆರ್ಸಿಬಿ 3 ವಿದೇಶಿ ಆಟಗಾರರ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಆಸ್ಟ್ರೇಲಿಯಾದ ಆ್ಯಡಂ ಜಂಪಾ ಬದಲಿಗೆ ಶ್ರೀಲಂಕಾದ ಸ್ಪಿನ್ ಆಲ್ರೌಂಡರ್ ವನಿಂದು ಹಸರಂಗ, ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಕಿವೀಸ್ನ ಫಿನ್ ಅಲೆನ್ ಬದಲಿಗೆ ಸಿಂಗಾಪುರ್ ತಂಡದ ಟಿಮ್ ಡೇವಿಡ್ ಮತ್ತು ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ಬದಲಿಗೆ ಶ್ರೀಲಂಕಾದ ದುಷ್ಮಂತ್ ಚಮೀರರನ್ನು ಘೋಷಿಸಿದೆ.
ಇದೀಗ ಖಾಲಿಯಿದ್ದ ತನ್ನ ವಿದೇಶಿ ಆಟಗಾರನ ಸ್ಥಾನಕ್ಕೆ ಜಾರ್ಜ್ ಗಾರ್ಟನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. 24 ವರ್ಷದ ಗಾರ್ಟನ್ 38 ಟಿ20 ಪಂದ್ಯಗಳಲ್ಲಿ 8.26ರ ಎಕಾನಮಿಯಲ್ಲಿ 44 ವಿಕೆಟ್ ಪಡೆದಿದ್ದಾರೆ. ಅವರು ಸಸೆಕ್ಸ್ ಮತ್ತು ದಿ ಹಂಡ್ರೆಡ್ನಲ್ಲಿ ಸದರ್ನ್ ಬ್ರೇವ್ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ.
ಇದನ್ನು ಓದಿ :ಆರ್ಸಿಬಿಗೆ ಆನೆಬಲ.. ಹಸರಂಗ ಸೇರಿದಂತೆ ಬೆಂಗಳೂರು ತಂಡಕ್ಕೆ ಮೂವರ ಸೇರ್ಪಡೆ..