ಲಕ್ನೋ (ಉತ್ತರ ಪ್ರದೇಶ):ಗಾಯದಿಂದ ಚೇತರಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಜೋಶ್ ಹೇಜಲ್‌ವುಡ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೋಮವಾರ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿಯುವ ಸಾದ್ಯತೆ ಇದೆ. ಜನವರಿಯಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಹೇಜಲ್‌ವುಡ್ ಗಾಯಗೊಂಡಿದ್ದರು. ಇದಾದ ಬಳಿಕ ಯಾವುದೇ ಪಂದ್ಯಗಳಲ್ಲೂ ಸಹ ಅವರು ಆಡಿರಲಿಲ್ಲ.
ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸ ಕೈಗೊಂಡ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಜೋಶ್ ಹೇಜಲ್‌ವುಡ್ ಆಯ್ಕೆಯಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಅರ್ಧದ ವೇಳೆಗೆ ಸಂಪೂರ್ಣ ಚೇತರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದರಂತೆ ಸೋಮವಾರದ ಪಂದ್ಯದಲ್ಲಿ ಆಡುವ ಸಾಧ್ಯತೆ ಬಗ್ಗೆ ವರದಿಗಳಾಗಿದೆ.
ಆಸ್ಟ್ರೇಲಿಯಾ ತಂಡಕ್ಕೆ ಮುಂದಿನ ತಿಂಗಳುಗಳಲ್ಲಿ ಪ್ರಮುಖ ಪಂದ್ಯಗಳು ಇರುವುದರಿದಂದ ಜೋಶ್ ಹೇಜಲ್‌ವುಡ್ ಅದರತ್ತವೂ ಗಮನ ಹರಿಸಲಿದ್ದಾರೆ. ಐಪಿಎಲ್ ನಂತರ ಭಾರತದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಮತ್ತು ಬಳಿಕ ನಡೆಯುವ ಆಶಸ್ ಟೆಸ್ಟ್ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಮತ್ತೆ ಗಾಯಕ್ಕೆ ತುತ್ತಾಗದಂತೆ ಸಂಪೂರ್ಣ ಫಿಟ್ ಆದ ನಂತರ ಕಣಕ್ಕಿಳಿಯುತ್ತಿದ್ದಾರೆ.
ತವರಿಗೆ ಮರಳಿದ ಲಿಟನ್ ದಾಸ್ :ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲಿಟನ್ ದಾಸ್ ಅವರು ಕೌಟುಂಬಿಕ ಕಾರಣ ಹಿನ್ನೆಲೆ ತವರಿಗೆ ಮರಳಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮುಂಬರುವ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಕುಟುಂಬದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯಿದ್ದು, ಇಂದು ಬೆಳಗ್ಗೆ ಢಾಕಾಗೆ ತೆರಳಿದ್ದಾರೆ ಎಂದು ಕೆಕೆಆರ್ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಯಾವಾಗ ಹಿಂತಿರುಗುತ್ತಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
28 ವರ್ಷದ ವಿಕೆಟ್ ಕೀಪರ್ ಕಂ ಬ್ಯಾಟರ್ ಲಿಟನ್ ಅವರನ್ನು ಕಳೆದ ವರ್ಷ ಹರಾಜಿನಲ್ಲಿ ಕೆಕೆಆರ್ ಮೂಲ ಬೆಲೆ 50 ಲಕ್ಷಕ್ಕೆ ಖರೀದಿಸಿತ್ತು. ಅವರು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಕೈಕ ಪಂದ್ಯ ಆಡಿದ್ದರು. ಜೇಸನ್ ರಾಯ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ದಾಸ್ ಆ ಪಂದ್ಯದಲ್ಲಿ ಕೇವಲ ನಾಲ್ಕು ರನ್ ಗಳಿಸಿದ್ದರು.
ಮಂಡಿರಜ್ಜು ಗಾಯಕ್ಕೆ ತುತ್ತಾದ ವಾಷಿಂಗ್ಟನ್ ಸುಂದರ್ : ವಾಷಿಂಗ್ಟನ್ ಸುಂದರ್ ಅವರು ಮಂಡಿರಜ್ಜು ಗಾಯದಿಂದ ಐಪಿಎಲ್ 2023ರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಅವರ ಫ್ರಾಂಚೈಸ್ ಸನ್ ರೈಸರ್ಸ್ ಹೈದರಾಬಾದ್ ಗುರುವಾರ ತಿಳಿಸಿದೆ. ವಾಷಿಂಗ್ಟನ್ ಪಂದ್ಯಾವಳಿಯ ಮೊದಲಾರ್ಧದಲ್ಲಿ ತಂಡದ ಪರ ಏಳು ಪಂದ್ಯಗಳಲ್ಲಿ ಆಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 24 ರನ್ ನೀಡಿ 3 ವಿಕೆಟ್ ಪಡೆದಿದ್ದು ಅವರ ಉತ್ತಮ ಬೌಲಿಂಗ್ ಆಗಿದ್ದು, ಅದೇ ಪಂದ್ಯದಲ್ಲಿ 15 ಎಸೆತಗಳಲ್ಲಿ 24* ರನ್ ಗಳಿಸಿ ಗಮನ ಸೆಳೆದಿದ್ದರು.
ಇದನ್ನೂ ಓದಿ:ಟಿ20 ಕ್ರಿಕೆಟ್ನಲ್ಲಿ ಇತಿಹಾಸ ಬರೆದ ವಿರಾಟ್: ಈ ಸಾಧನೆ ಮಾಡಿದ ಮೊದಲಿಗೆ ಕೊಹ್ಲಿ