ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಅರ್ಧದಷ್ಟು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿವೆ. ಇನ್ನು ಕೆಲವು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಉಳಿದಿರುವ ಪಂದ್ಯಗಳಿಗೆ ಡೇವಿಡ್ ವಿಲ್ಲಿ ಬದಲಿಗೆ ಕೇದಾರ್ ಜಾಧವ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕೇದಾರ್ ತಂಡ ಸೇರ್ಪಡೆ ಬಗ್ಗೆ ಆರ್‌ಸಿಬಿ ತನ್ನ ಟ್ವಿಟರ್ ಖಾತೆಯಲ್ಲಿ ಸೋಮವಾರ ಮಾಹಿತಿ ಹಂಚಿಕೊಂಡಿದೆ.
ಇಂಗ್ಲೆಂಡ್‌ನ ಆಲ್‌ರೌಂಡರ್ ವಿಲ್ಲಿ ಈ ಋತುವಿನಲ್ಲಿ ಆರ್‌ಸಿಬಿ ಪರ ನಾಲ್ಕು ಪಂದ್ಯಗಳನ್ನಾಡಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2010 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಜಾಧವ್ ಇದುವರೆಗೆ ಆಡಿರುವ ಐಪಿಎಲ್ನ 93 ಪಂದ್ಯಗಳಲ್ಲಿ ಒಟ್ಟು 1,196 ರನ್ಗಳನ್ನು ಗಳಿಸಿದ್ದಾರೆ. ಈ ಹಿಂದೆ 17 ಪಂದ್ಯಗಳಲ್ಲಿ ಆರ್‌ಸಿಬಿ ಪ್ರತಿನಿಧಿಸಿರುವ ಬಲಗೈ ಬ್ಯಾಟರ್ ಅವರನ್ನು ಆರ್‌ಸಿಬಿ 1 ಕೋಟಿ ರೂ. ಕೊಟ್ಟು ಖರೀದಿಸಿದೆ. 38ರ ಹರೆಯದ ಮಹಾರಾಷ್ಟ್ರದ ಕ್ರಿಕೆಟರ್ ಭಾರತ ಪರ ಒಟ್ಟು 73 ಏಕದಿನ ಪಂದ್ಯಗಳನ್ನು ಆಡಿದ್ದು, 1,389 ರನ್ ಗಳಿಸಿದ್ದಾರೆ. 27 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇನ್ನು ಅವರು ಆಡಿರುವ 9 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 58 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ ಯಾವ ತಂಡಕ್ಕೂ ಹರಾಜಾಗದ ಕಾರಣ ಮರಾಠಿ ಭಾಷೆಯಲ್ಲಿ ಕಾಮೆಂಟರಿ ಮಾಡುತ್ತಿದ್ದ ಜಾಧವ್ ಇದೀಗ ಆರ್‌ಸಿಬಿ ತಂಡಕ್ಕೆ ಮರಳಿದ್ದು, ಅನುಭವಿ ಬಲಗೈ ಬ್ಯಾಟರ್ನ ಲಾಭ ಪಡೆಯಲು ತಂಡ ಸಿದ್ದವಾಗಿದೆ.