ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಭಾನುವಾರ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಹಾಗೂ 'ಮಿಸ್ಟರ್ 360' ಎಬಿ ಡಿವಿಲಿಯರ್ಸ್ ಅವರಿಗೆ ಗೌರವಾರ್ಥವಾಗಿ ಆರ್‌ಸಿಬಿ 'ಹಾಲ್ ಆಫ್ ಫೇಮ್' ನೀಡಿ ಗೌರವಿಸಲಾಯಿತು. ಇದೇ ವೇಳೆ ವಿಲಿಯರ್ಸ್ (17) ಹಾಗೂ ಗೇಲ್ (333) ಅವರ ಜೆರ್ಸಿಯನ್ನು ನಿವೃತ್ತಿಗೊಳಿಸಲಾಗಿದೆ. ಮೂರು ವರ್ಷಗಳ ಬಳಿಕ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಆರ್‌ಸಿಬಿ ಅಭಿಮಾನಿಗಳು ತವರಿನ ಅಂಗಳದಲ್ಲಿ ಇಂತಹ ಕ್ಷಣವನ್ನು ಅನುಭವಿಸಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಭಾನುವಾರವಾದ ಕಾರಣ ಇನ್ನಷ್ಟು ಅಭಿಮಾನಿಗಳ ದಂಡು ಕ್ರೀಡಾಂಗಣದತ್ತ ಹರಿದುಬಂದಿತ್ತು. ಮೈದಾನದಲ್ಲಿ ಹಾಲ್ ಆಫ್ ಫೇಮ್ ಗೌರವ ಪಡೆದ ಗೇಲ್, ಎಬಿಡಿ ಜೊತೆಗೆ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೆಸಿಸ್, ಗ್ಲೇನ್ ಮ್ಯಾಕ್ಸ್ವೆಲ್ ಸೇರಿದಂತೆ ಇತರ ಆಟಗಾರರನ್ನು ಹುರಿದುಂಬಿಸಿದರು. ಈ ವೇಳೆ ಬ್ರಾಂಡ್ ಲಾಂಚ್ ಜೊತೆಗೆ ಐಪಿಎಲ್ ಆರಂಭಕ್ಕೂ ಮುನ್ನ ಪೂರ್ಣ ತಂಡವು ಅಭ್ಯಾಸದಲ್ಲಿ ನಿರತವಾಗಿದ್ದು, ಅಭಿಮಾನಿಗಳು ಕಣ್ತುಂಬಿಕೊಂಡರು.
ಗೌರವ ಸ್ವೀಕರಿಸಿ ಮಾತನಾಡಿದ ಕ್ರಿಸ್ ಗೇಲ್, ''ಮೊದಲನೆಯದಾಗಿ, ನನ್ನನ್ನು ಹಾಲ್ ಆಫ್ ಫೇಮ್‌ಗೆ ಸೇರಿಸಿದ್ದಕ್ಕಾಗಿ ಆರ್ಸಿಬಿಗೆ ದೊಡ್ಡ ಧನ್ಯವಾದ. ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಪರ ಆಡಿದ ಹಲವು ಮೋಜಿನ ನೆನಪು ನನ್ನಲ್ಲಿವೆ. ನನಗೆ ಸ್ವಂತ ಮನೆಗೆ ಮರಳುತ್ತಿರುವಂತೆ ಭಾಸವಾಗುತ್ತಿದೆ. ತಂಡ, ಆಟಗಾರರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳೊಂದಿಗೆ ಮತ್ತೆ ಸೇರಲು ಸಾಧ್ಯವಾಗಿರುವುದು ಸಂತಸ ತಂದಿದೆ. ಆರ್‌ಸಿಬಿ, ಆರ್‌ಸಿಬಿ ಜಪ ಯಾವಾಗಲೂ ನನ್ನೊಂದಿಗಿರಲಿದೆ'' ಎಂದರು.