ಕೋಲ್ಕತ್ತಾ: ಭಾನುವಾರ ಕೋಲ್ಕತ್ತಾದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ ಭರ್ಜರಿ ಜಯ ಸಾಧಿಸಿದೆ. ಅಜಿಂಕ್ಯ ರಹಾನೆ ಚೆನ್ನೈ ಸೂಪರ್ ಕಿಂಗ್ಸ್ ಪರ 29 ಎಸೆತಗಳಲ್ಲಿ 71 ರನ್ ಗಳಿಸಿ ಮಿಂಚಿದರು. ಈಡನ್ ಗಾರ್ಡನ್ಸ್ನಲ್ಲಿ ನೆರದಿದ್ದ ಸಹಸ್ರಾರು ಪ್ರೇಕ್ಷಕರ ಬೆಂಬಲದಿಂದ ಉತ್ತೇಜಿತರಾಗಿ ಭರ್ಜರಿ ಬ್ಯಾಟ್ ಬೀಸಿದರು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ರನ್‌ಗಳಿಂದ ಭರ್ಜರಿ ಜಯಗಳಿಸಲು ಕಾರಣರಾದರು.
ಟೆಸ್ಟ್ ಪಂದ್ಯಗಳಿಂದ ಟಿ -20 ಪಂದ್ಯಗಳಿಗೆ ಹೊಂದಿಕೊಂಡಂತೆ ಕಂಡು ಬರುತ್ತಿರುವ ಅಜಿಂಕ್ಯಾ ರಹಾನೆ, ತಮ್ಮ ಸಂವೇದನಾಶೀಲ ಸ್ಟ್ರೋಕ್-ಪ್ಲೇ ಮೂಲಕ ಈಡನ್ ಗಾರ್ಡನ್ಸ್ ನಲ್ಲಿ ರನ್ಗಳ ಹೊಳೆಯನ್ನೇ ಹರಿಸಿದರು. ಶಿವಂ ದುಬೆ 21 ಎಸೆತಗಳಲ್ಲಿ 50 ಮತ್ತು ಡೆವೊನ್ ಕಾನ್ವೇ 40 ಎಸೆತಗಳಲ್ಲಿ 56 ರನ್ಗಳನ್ನ ಸಿಡಿಸುವ ಮೂಲಕ CSK ಭವ್ಯವಾದ 235 ರನ್ ಗಳಿಸಲು ನೆರವಾದರು.
ಧೋನಿ ನೇತೃತ್ವದ ಸಿಎಸ್ಕೆ ತಂಡದ ಈ ಬೃಹತ್ ಮೊತ್ತ ಬೆನ್ನಟ್ಟಿದ ಶಾರೂಖ್ ಮಾಲಿಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಬರೋಬ್ಬರಿ 49 ರನ್ ಗಳ ಅಂತರದಲ್ಲಿ ಪರಾಭವಗೊಂಡಿತು.
ಇನ್ನು ಕೆಕೆಆರ್ ಪರ ಜೇಸನ್ ರಾಯ್ 61 ರನ್ ಮತ್ತು ರಿಂಕು ಸಿಂಗ್ ಅಜೇಯ 53ರನ್ ಗಳನ್ನು ಬಾರಿಸಿ ಗೆಲುವಿಗಾಗಿ ಕೊನೆವರೆಗೂ ಹೋರಾಟ ನಡೆಸಿದರಾದರೂ ಧೋನಿ ಬಳಗದ ಬೃಹತ್ ರನ್ಗಳ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.